ನವದೆಹಲಿ: ಭಾರತ ಸೇರಿ ವಿವಿಧ ದೇಶಗಳ ಔಷಧ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.100ರಷ್ಟು ತೆರಿಗೆ ಹೇರಿದ ಬೆನ್ನಲ್ಲೇ, ಭಾರತದ ನೆರವಿಗೆ ಚೀನಾ ಧಾವಿಸಿದೆ. ಭಾರತದ ಔಷಧ ಆಮದಿನ ಮೇಲಿದ್ದ ಶೇ.30ರಷ್ಟು ತೆರಿಗೆಯನ್ನು ಶೂನ್ಯಕ್ಕಿಳಿಸಿ ಆದೇಶ ಹೊರಡಿಸಿದೆ. ಅಮೆರಿಕದ ತೆರಿಗೆ ಹೆಚ್ಚಳದಿಂದಾಗಿ ಜಗತ್ತಿನ ಔಷಧ ಕೇಂದ್ರವಾಗಿದ್ದ ಭಾರತಕ್ಕೆ ಅಮೆರಿಕ ಮಾರುಕಟ್ಟೆಯು ತುಟ್ಟಿಯಾಗುತ್ತಿದೆ. ತೆರಿಗೆಯ ಹೊರೆ ಭಾರತದ ಕಂಪನಿಗಳ ಮೇಲೆ ಬಿದ್ದು, ವೆಚ್ಚ ಹೆಚ್ಚಳವಾಗುತ್ತಿದೆ. ಈಗ ಚೀನಾ ತನ್ನ ತೆರಿಗೆಯನ್ನು ಶೂನ್ಯಕ್ಕಿಳಿಸಿರುವುದರಿಂದ ಉತ್ಪಾದಕರು ಚೀನಾ ಕಡೆಗೆ ಮುಖ ಮಾಡಲಿದ್ದಾರೆ. ಇಷ್ಟು ಸಮಯ ತೆರಿಗೆಯಿಂದಾಗಿ ಕಷ್ಟವಾಗುತ್ತಿದ್ದ ಚೀನಾ ಮಾರುಕಟ್ಟೆಗೆ ಸುಲಭ ಪ್ರವೇಶ ಸಿಗಲಿದೆ. ಇದರಿಂದಾಗಿ ದೇಶದಲ್ಲಿ ಉಳಿದುಕೊಳ್ಳುತ್ತಿದ್ದ ಔಷಧಗಳು ಚೀನಾಕ್ಕೆ ರಫ್ತಾಗಲಿದೆ. 2024ರಲ್ಲಿ 7 ಲಕ್ಷ ಕೋಟಿ ರು. ಮೌಲ್ಯದ ಔಷಧವನ್ನು ಭಾರತ ಚೀನಾ ರಫ್ತು ಮಾಡಿತ್ತು. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.ಟ್ರಂಪ್ ತೆರಿಗೆ ದಾಳಿ ಬಳಿಕ ಶಾಂಘೈ ಶೃಂಗದ ವೇಳೆ ಭಾರತ- ಚೀನಾ- ರಷ್ಯಾ ಜಂಟಿಯಾಗಿ ಅಮೆರಿಕದ ವಿರುದ್ಧ ತೊಡೆತಟ್ಟಿದ್ದವರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಒಂದು ಕಡೆ ಅಮೆರಿಕವು ವಿಶೇಷ ಕೌಶಲ್ಯ ಹೊಂದಿರುವ ವಿದೇಶಿಗರಿಗೆ ನೀಡಲಾಗುತ್ತಿರುವ ಎಚ್1ಬಿ ವೀಸಾಗೆ ಕಡಿವಾಣ ಹಾಕಲು ಮುಂದಾಗಿದ್ದರೆ, ಇನ್ನೊಂದು ಕಡೆ ಚೀನಾ ಅಂಥ ನೌಕರರನ್ನು ತನ್ನತ್ತ ಸೆಳೆಯಲು ಸಜ್ಜಾಗಿ ನಿಂತಿದೆ. ಇದಕ್ಕೆಂದೇ 'ಕೆ ವೀಸಾ' ಪರಿಚಯಿಸಲು ಮುಂದಾಗಿದೆ. ವಿಶ್ವದೆಲ್ಲೆಡೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯುವ ಉದ್ಯೋಗಿಗಳನ್ನು ಸೆಳೆಯಲೆಂದೇ ಈ ವೀಸಾ ಪರಿಚಯಿಸುತ್ತಿದೆ. ಈ ಸಂಬಂಧ ಚೀನಾ ಪ್ರಧಾನಿ ಲಿ ಕಿಯಾಂಗ್ ಅವರು ವಿದೇಶಿಗರ ಪ್ರವೇಶ ಮತ್ತು ವಾಪಸಾತಿ ಕುರಿತ ಆದೇಶಕ್ಕೆ ಸಹಿಹಾಕಿದ್ದು, ಅದರಂತೆ ಅ.1ರಿಂದಲೇ ವಿಶ್ವದ ಮೂಲೆ ಮೂಲೆಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಯುವ ಉದ್ಯೋಗಿಗಳಿಗೆ ಚೀನಾ ದೇಶದ ಬಾಗಿಲು ತೆರೆಯಲಿದೆ ಎಂದು ವರದಿಯಾಗಿದೆ.