ಢಾಕ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬೆಂಬಲ ಮತ್ತು ಆಶ್ರಯ ನೀಡಿದ ಭಾರತದ ಮೇಲೆ ಬಾಂಗ್ಲಾದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ವಾಗ್ದಾಳಿ ನಡೆಸಿದ್ದಾರೆ. "ಹಸೀನಾ ಪದಚ್ಯುತಿಗೆ ಕಾರಣವಾದ ಕಳೆದ ವರ್ಷದ ವಿದ್ಯಾರ್ಥಿ ಪ್ರತಿಭಟನೆಯನ್ನು ಭಾರತ ಇಷ್ಟಪಟ್ಟಿರಲಿಲ್ಲ; ಆದ್ದರಿಂದ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ" ಎಂದು ಅವರು ವಿಶ್ಲೇಷಿಸಿದ್ದಾರೆ. "ಈ ಎಲ್ಲ ಸಮಸ್ಯೆಗಳನ್ನು ಸೃಷ್ಟಿಸಿದ ಮತ್ತು ಯುವಕರನ್ನು ಕೊಂದ ಹಸೀನಾಗೆ ಭಾರತ ಆಶ್ರಯ ನೀಡಿದೆ" ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾಗವಹಿಸಲು ನ್ಯೂಯಾರ್ಕ್ ಗೆ ತೆರಳಿದ್ದ ಅವರು ಹೇಳಿದರು. "ಭಾರತದ ಕಡೆಯಿಂದ ಹಲವು ಸುಳ್ಳು ಸುದ್ದಿಗಳನ್ನೂ ಹರಡಲಾಗುತ್ತಿದೆ" ಎಂದು ಅವರು ಆಪಾದಿಸಿದರು. ಕಳೆದ ವರ್ಷದ ಜುಲೈ- ಆಗಸ್ಟ್ ತಿಂಗಳಲ್ಲಿ ತಮ್ಮ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ "ಮಾನವತೆಯ ಮೇಲಿನ ಅಪರಾಧ ಕೃತ್ಯ"ವನ್ನು ಶೇಖ್ ಹಸೀನಾ ಎಸಗಿದ್ದಾರೆ ಎಂದು ಢಾಕಾದ ಮಧ್ಯಂತರ ಸರ್ಕಾರ ಆಪಾದಿಸಿದ್ದು, ಹಸೀನಾ ಗಡೀಪಾರಿಗೆ ಕೋರಿತ್ತು. ಆದರೆ ಭಾರತ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಫಿನ್ಲೆಂಡ್ ಅಧ್ಯಕ್ಷ ಅಲೆಗ್ಸಾಂಡರ್ ಸ್ಟುಬ್ ಅವರ ಜತೆ ನಡೆದ ಪ್ರತ್ಯೇಕ ಭೇಟಿಯಲ್ಲಿ "ಹಸೀನಾ ಮತ್ತು ಅವರ ಕುಟುಂಬ ಸದಸ್ಯರ ವಿಚಾರಣೆ ಮಧ್ಯಂತರ ಸರ್ಕಾರದ ಮೊದಲ ಆದ್ಯತೆ" ಎಂದು ಸ್ಪಷ್ಟಪಡಿಸಿದರು.