ಮಾಲ್ಡೀವ್ಸ್: ಸಮುದ್ರಗಳು ದೇಶಗಳನ್ನು ವಿಭಜಿಸುವ ಸ್ಥಳವಾಗದೆ, ಅವುಗಳನ್ನು ಪರಸ್ಪರ ಬೆಸೆಯುವ ಕೊಂಡಿಯಾಗಿರಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಭಿಪ್ರಾಯಪಟ್ಟಿದ್ದಾರೆ. ಹಿಂದೂ ಮಹಾಸಾಗರದ ಕರಾವಳಿ ದೇಶಗಳ ನಡುವಿನ ಸಾಮಾನ್ಯ ಸಮುದ್ರ ಸಂಬಂಧಗಳು, ಸಾಂಸ್ಕೃತಿಕ ಬಾಂಧವ್ಯ ಹಾಗೂ ಪ್ರಾದೇಶಿಕ ಸ್ಥಿರತೆಗಾಗಿ ಎಲ್ಲಾ ರಾಷ್ಟ್ರಗಳು ನಿರಂತರವಾಗಿ ಪರಸ್ಪರ ಸಹಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಹಿಂದೂ ಮಹಾಸಾಗರದ ಕರಾವಳಿ ದೇಶಗಳಾದ ನಾವು ಒಂದೇ ಸಮುದ್ರ ಪ್ರದೇಶ ಮತ್ತು ಶತಮಾನಗಳ ಸಾಂಸ್ಕೃತಿಕ ಪರಂಪರೆಯನ್ನು ಹಂಚಿಕೊಂಡಿದ್ದೇವೆ. ಮುಂದಿನ ಪೀಳಿಗೆಗೂ ದೇಶಗಳನ್ನು ಒಗ್ಗೂಡಿಸುವ ಈ ಪರಂಪರೆಯನ್ನು ಉಳಿಸಿಕೊಡಬೇಕಿದೆ ಎಂದು ದೋವಲ್ ತಿಳಿಸಿದರು.
2020ರ ನವೆಂಬರ್ನಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುರಕ್ಷತೆ, ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವ ಸಾಮೂಹಿಕ ದೃಷ್ಟಿಕೋನದೊಂದಿಗೆ 'ಕೊಲಂಬೊ ಭದ್ರತಾ ಸಮಾವೇಶ' (ಸಿಎಸ್ಸಿ) ಸ್ಥಾಪನೆಯಾಯಿತು. ಸದಸ್ಯ ರಾಷ್ಟ್ರಗಳ ಸಹಕಾರದಿಂದ ಈ ಸಂಘಟನೆ ಉತ್ತಮ ಪ್ರಗತಿ ಸಾಧಿಸಿದ್ದು, ಈಗ ತನ್ನದೇ ಆದ ಕಾರ್ಯದರ್ಶಿ ಕಚೇರಿ ಮತ್ತು ಸಮರ್ಥ ಪ್ರಧಾನ ಕಾರ್ಯದರ್ಶಿಯನ್ನು ಹೊಂದಿದೆ. ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಮತ್ತು ಜನರ ಹಿತದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಈ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
2024ರ ಆಗಸ್ಟ್ನಲ್ಲಿ ಸಿಎಸ್ಸಿ ಚಾರ್ಟರ್ (ಒಪ್ಪಂದದ ನಿಯಮಾವಳಿ) ಮತ್ತು ಕಾರ್ಯದರ್ಶಿ ಕಚೇರಿ ಸ್ಥಾಪನೆಗೆ ಸಂಬಂಧಿಸಿದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇದೇ ವೇಳೆ ದೋವಲ್ ಸ್ಮರಿಸಿದರು. ಮಾಲ್ಡೀವ್ಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಇಬ್ರಾಹಿಂ ಲತೀಫ್, ಶ್ರೀಲಂಕಾದಲ್ಲಿನ ಮಾರಿಷಸ್ ಹೈಕಮಿಷನರ್ ಹಯಮಂಡೋಯಲ್ ದಿಲ್ಲುಮ್ ಹಾಗೂ ಶ್ರೀಲಂಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಾಗಲ ರತ್ನಾಯಕೆ ಅವರು ತಮ್ಮ ದೇಶಗಳ ಪರವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸಭೆಯಲ್ಲಿ ದೇಶಗಳ ನಡುವಿನ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು.