image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಕೆನಡಾದ ಸರ್ರೆಯಲ್ಲಿ ಭಾರತೀಯ ಮೂಲದ ದಂಪತಿಯ ಭೀಕರ ಹತ್ಯೆ; ಗ್ಯಾಂಗ್ ವಾರ್ ಶಂಕೆ

ಕೆನಡಾದ ಸರ್ರೆಯಲ್ಲಿ ಭಾರತೀಯ ಮೂಲದ ದಂಪತಿಯ ಭೀಕರ ಹತ್ಯೆ; ಗ್ಯಾಂಗ್ ವಾರ್ ಶಂಕೆ

ಸರ್ರೆ (ಕೆನಡಾ): ಕೆನಡಾದ ಸರ್ರೆಯಲ್ಲಿರುವ ವಾಲ್‌ಮಾರ್ಟ್ ಮಳಿಗೆಯ ಪಾರ್ಕಿಂಗ್ ಪ್ರದೇಶದಲ್ಲಿ ಭಾರತೀಯ ಮೂಲದ ಯುವ ದಂಪತಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತರನ್ನು ಡೆಲ್ಟಾ ಟೌನ್‌ಶಿಪ್ ನಿವಾಸಿಗಳಾದ ಗಗನ್‌ಪ್ರೀತ್ (ಗ್ಯಾರಿ) ರೆಹಾಲ್ (23) ಮತ್ತು ಸುಖ್‌ಜೀತ್ ಕೌರ್ (24) ಎಂದು ಗುರುತಿಸಲಾಗಿದೆ.

ನವೆಂಬರ್ 15ರ ರಾತ್ರಿ ಸುಮಾರು 10:38ರ ವೇಳೆಗೆ ಪಾರ್ಕಿಂಗ್ ಸ್ಥಳದಲ್ಲಿ ಗುಂಡೇಟಿನಿಂದ ಗಾಯಗೊಂಡು ಬಿದ್ದಿದ್ದ ಇಬ್ಬರನ್ನೂ ರಕ್ಷಣಾ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿರುವುದಾಗಿ ಸರ್ರೆ ಪೊಲೀಸ್ ಸೇವೆ ದೃಢಪಡಿಸಿದೆ. ಘಟನಾ ಸ್ಥಳದಲ್ಲಿ ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿದ್ದ ಕೆಂಪು ಬಣ್ಣದ ಮಸ್ತಾಂಗ್ ಕಾರು ಪತ್ತೆಯಾಗಿದೆ.

ಮೃತ ಗಗನ್‌ಪ್ರೀತ್ ರೆಹಾಲ್ ಶಸ್ತ್ರಾಸ್ತ್ರ ಸಂಬಂಧಿತ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಮೊದಲೇ ಪರಿಚಿತನಾಗಿದ್ದ. ಸುಖ್‌ಜೀತ್ ಕೌರ್ ಕೆನಡಾದಲ್ಲಿ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಘಟನೆ ನಡೆದ ಸುಮಾರು 13 ನಿಮಿಷಗಳ ನಂತರ ಸಮೀಪದಲ್ಲೇ ಕಾರೊಂದು ಬೆಂಕಿಗಾಹುತಿಯಾಗಿದ್ದು, ಹಂತಕರು ಕೃತ್ಯಕ್ಕೆ ಬಳಸಿದ ವಾಹನ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಪ್ರಕರಣವನ್ನು ಕೆನಡಾದ ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್ (IHIT) ತನಿಖೆ ನಡೆಸುತ್ತಿದೆ. ಇದು ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಗುರಿಯಿಟ್ಟ ದಾಳಿ ಎಂದು ಅಧಿಕಾರಿಗಳು ತಿಳಿಸಿದ್ದು, ಘಟನೆಯ ಕುರಿತು ಸಿಸಿಟಿವಿ ಅಥವಾ ಡ್ಯಾಶ್ ಕ್ಯಾಮೆರಾ ದೃಶ್ಯಾವಳಿಗಳಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಳೆದ ತಿಂಗಳಷ್ಟೇ ಬ್ರಿಟಿಷ್ ಕೊಲಂಬಿಯಾದ ಲ್ಯಾಂಗ್ಲಿ ಪ್ರದೇಶದಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಸರ್ರೆ ನಿವಾಸಿಯಾಗಿದ್ದ 25 ವರ್ಷದ ಭಾರತೀಯ ಯುವಕ ತುಷಾರ್ ಶರ್ಮಾ ಅವರ ಮೃತದೇಹ ಪತ್ತೆಯಾಗಿತ್ತು. ಇದೀಗ ಸರ್ರೆಯಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ಸ್ಥಳೀಯ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ.

 

Category
ಕರಾವಳಿ ತರಂಗಿಣಿ