image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಕ್ರಿಸ್‌ಮಸ್ ದ್ವೀಪದಲ್ಲಿ ಕೆಂಪು ಏಡಿಗಳ ವಾರ್ಷಿಕ ವಲಸೆ ಆರಂಭ: ಕಡಲತೀರದತ್ತ ಹೆಜ್ಜೆ ಹಾಕಿದ 10 ಕೋಟಿಗೂ ಅಧಿಕ ಏಡಿಗಳು

ಕ್ರಿಸ್‌ಮಸ್ ದ್ವೀಪದಲ್ಲಿ ಕೆಂಪು ಏಡಿಗಳ ವಾರ್ಷಿಕ ವಲಸೆ ಆರಂಭ: ಕಡಲತೀರದತ್ತ ಹೆಜ್ಜೆ ಹಾಕಿದ 10 ಕೋಟಿಗೂ ಅಧಿಕ ಏಡಿಗಳು

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಸ್‌ಮಸ್ ದ್ವೀಪದಲ್ಲಿ ವಾಸಿಸುವ ಸುಮಾರು 10 ಕೋಟಿಗೂ ಹೆಚ್ಚು ಕೆಂಪು ಏಡಿಗಳು ತಮ್ಮ ವಾರ್ಷಿಕ ವಲಸೆಯನ್ನು ಆರಂಭಿಸಿವೆ. ಮಳೆಗಾಲ ಶುರುವಾಗುತ್ತಿದ್ದಂತೆಯೇ ಸಂತಾನೋತ್ಪತ್ತಿಗಾಗಿ ಈ ಏಡಿಗಳು ದಟ್ಟ ಕಾಡಿನಿಂದ ಸಮುದ್ರದ ಕಡೆಗೆ ಸಾಗುತ್ತಿವೆ ಎಂದು ಪರಿಸರ ಸಂರಕ್ಷಣಾಕಾರರು ಮಾಹಿತಿ ನೀಡಿದ್ದಾರೆ.

ಅರಣ್ಯಗಳ ಮೂಲಕ ಸಾಗಿ, ರಸ್ತೆಗಳು ಹಾಗೂ ವಿಶೇಷವಾಗಿ ನಿರ್ಮಿಸಲಾದ ಸೇತುವೆಗಳನ್ನು ದಾಟಿ ಇವು ಸಮುದ್ರ ಸೇರುತ್ತವೆ. ಈ ಬೃಹತ್ ವಲಸೆಯ ಸಮಯವು ಚಂದ್ರನ ಚಕ್ರಗಳೊಂದಿಗೆ ನೇರ ಸಂಬಂಧ ಹೊಂದಿದ್ದು, ಚಂದ್ರನ ಕಡೆಯ ಹಂತದಲ್ಲಿ ಸಮುದ್ರದ ಉಬ್ಬರವಿಳಿತ ಕಡಿಮೆಯಾಗುವ ಮುಂಜಾನೆಯ ಸಮಯದಲ್ಲಿ ಹೆಣ್ಣು ಏಡಿಗಳು ಮೊಟ್ಟೆಗಳನ್ನು ಇಡುತ್ತವೆ ಎಂದು ಪಾರ್ಕ್ಸ್ ಆಸ್ಟ್ರೇಲಿಯಾ ತಿಳಿಸಿದೆ.

ಇಂಡೋನೇಷ್ಯಾದ ದಕ್ಷಿಣಕ್ಕೆ ಸುಮಾರು 350 ಕಿಲೋಮೀಟರ್ ಮತ್ತು ಆಸ್ಟ್ರೇಲಿಯಾದ ಮುಖ್ಯ ಭೂಭಾಗದಿಂದ ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಈ ದ್ವೀಪದಲ್ಲಿ ಏಡಿಗಳ ಸುರಕ್ಷಿತ ಪ್ರಯಾಣಕ್ಕಾಗಿ ಸಂರಕ್ಷಣಾವಾದಿಗಳು ತಿಂಗಳುಗಟ್ಟಲೆ ಸಿದ್ಧತೆ ನಡೆಸುತ್ತಾರೆ. ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ ಎಂದು ಕ್ರಿಸ್‌ಮಸ್ ದ್ವೀಪದ ರಾಷ್ಟ್ರೀಯ ಉದ್ಯಾನದ ವ್ಯವಸ್ಥಾಪಕ ಕ್ರಿಸ್ ಚಾರ್ಟಸ್ ಹೇಳಿದ್ದಾರೆ. ಇದೇ ವೇಳೆ, ಈ ಕೆಂಪು ಏಡಿಗಳ ಸಂತತಿಗೆ ದೊಡ್ಡ ಕಂಟಕವಾಗಿರುವ 'ಹಳದಿ ಕ್ರೇಜಿ ಇರುವೆ'ಗಳನ್ನು (Yellow Crazy Ants) ನಿಯಂತ್ರಿಸುವುದು ಹಾಗೂ ಈ ವಿಶಿಷ್ಟ ಪ್ರಭೇದವನ್ನು ಸಂರಕ್ಷಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

Category
ಕರಾವಳಿ ತರಂಗಿಣಿ