image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ರಾಜಕೀಯ ಹಿಂಸಾಚಾರ: ಯೂನಸ್ ನಿವಾಸ, ಗ್ರಾಮೀಣ ಬ್ಯಾಂಕ್ ಶಾಖೆಗಳಿಗೆ ಬೆಂಕಿ

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ರಾಜಕೀಯ ಹಿಂಸಾಚಾರ: ಯೂನಸ್ ನಿವಾಸ, ಗ್ರಾಮೀಣ ಬ್ಯಾಂಕ್ ಶಾಖೆಗಳಿಗೆ ಬೆಂಕಿ

ಢಾಕ : ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ನಿಷೇಧಿತ ಅವಾಮಿ ಲೀಗ್ ಪಕ್ಷವು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೂ ಮುನ್ನ ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು, ಹಲವೆಡೆ ಬಾಂಬ್ ಸ್ಫೋಟ ಹಾಗೂ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಚಟ್ಟೋಗ್ರಾಮ್‌ನ ಪಂಚಲೈಶ್ ಪ್ರದೇಶದಲ್ಲಿರುವ ಬಾಂಗ್ಲಾದೇಶದ ಮಾಜಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆಗೆ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮನೆಯ ನೆಲಮಹಡಿಯ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಪೊಲೀಸರು ನಂದಿಸಿದ್ದು, ಮೇಲಿನ ಮಹಡಿಗಳಲ್ಲಿದ್ದ ಯೂನಸ್ ಸಹೋದರರ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೂ ಮುನ್ನ, ನವೆಂಬರ್ 10ರಿಂದ ಈವರೆಗೆ ಸಿಲ್ಹೆಟ್, ರಾಜ್‌ಶಾಹಿ, ಬರಿಶಾಲ್ ಮತ್ತು ಫರೀದ್‌ಪುರ ಸೇರಿದಂತೆ ದೇಶದ ವಿವಿಧೆಡೆ ಯೂನಸ್ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್‌ನ ಕನಿಷ್ಠ 37 ಶಾಖೆಗಳು ಮತ್ತು ಕಚೇರಿಗಳ ಮೇಲೆ ಬೆಂಕಿ ದಾಳಿ ಅಥವಾ ದಾಳಿ ಪ್ರಯತ್ನಗಳು ನಡೆದಿವೆ.

ರಾಜಧಾನಿ ಢಾಕಾದಲ್ಲೂ ಗುರುವಾರ ಬೆಳಗಿನ ಜಾವ ಕಚ್ಚಾ ಬಾಂಬ್ ಸ್ಫೋಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿದ್ದು, ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ. ಹಿಂಸಾಚಾರ ತಡೆಯಲು ಮುಂದಾಗಿರುವ ಪೊಲೀಸರು, ಪ್ರತಿಭಟನೆಗೂ ಮುನ್ನದ 24 ಗಂಟೆಗಳಲ್ಲಿ ಮಾಜಿ ಶಿಕ್ಷಣ ಸಚಿವ ನೂರುಲ್ ಇಸ್ಲಾಂ ನಹೀದ್ ಸೇರಿದಂತೆ 565 ಮಂದಿಯನ್ನು ಢಾಕಾದಲ್ಲಿ ಬಂಧಿಸಿದ್ದಾರೆ. ಸಿಸಿಟಿವಿ ಮತ್ತು ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಸಲಾವುದ್ದೀನ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ದೇಶದ 64 ಜಿಲ್ಲೆಗಳ ಪೈಕಿ ಕನಿಷ್ಠ 28 ಜಿಲ್ಲೆಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪ್ರಮುಖ ನಗರಗಳಲ್ಲಿ ಗಡಿ ಭದ್ರತಾ ಪಡೆಗಳನ್ನು ನಿಯೋಜಿಸಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.

2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಅಧಿಕಾರ ಕಳೆದುಕೊಂಡು ಭಾರತಕ್ಕೆ ತೆರಳಿದ್ದ ಶೇಖ್ ಹಸೀನಾ ಅವರಿಗೆ, ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದಡಿ ವಿಶೇಷ ನ್ಯಾಯಮಂಡಳಿ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಿತ್ತು. ಈ ತೀರ್ಪಿನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮತ್ತು ಬಾಂಗ್ಲಾದೇಶಕ್ಕೆ ಮರಳಲು ಹೊಸ ಪಾಸ್‌ಪೋರ್ಟ್ ನೀಡುವಂತೆ ಹಸೀನಾ ಸಲ್ಲಿಸಿದ್ದ ಮನವಿಯನ್ನು ಸರ್ಕಾರ ತಿರಸ್ಕರಿಸಿದ್ದನ್ನು ವಿರೋಧಿಸಿ ಅವಾಮಿ ಲೀಗ್ ನವೆಂಬರ್ 19ರಂದು ಲಾಕ್‌ಡೌನ್‌ಗೆ ಕರೆ ನೀಡಿತ್ತು. 2006ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹಾಗೂ 1983ರಲ್ಲಿ ಕಿರುಸಾಲ ಯೋಜನೆಗಾಗಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿದ್ದ ಮುಹಮ್ಮದ್ ಯೂನಸ್ ಅವರ ನೇತೃತ್ವದ ಮಧ್ಯಂತರ ಆಡಳಿತದಲ್ಲಿ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿ, ನಾಯಕರನ್ನು ಬಂಧಿಸಿದ್ದರಿಂದ ಉಭಯ ಬಣಗಳ ನಡುವಿನ ಸಂಘರ್ಷ ಇದೀಗ ಮತ್ತಷ್ಟು ವಿಕೋಪಕ್ಕೆ ತಿರುಗಿದೆ.

Category
ಕರಾವಳಿ ತರಂಗಿಣಿ