ಅಮೇರಿಕ : ವಿಶ್ವಸಂಸ್ಥೆ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ನಡುವಿನ ಸಹಕಾರಕ್ಕೆ ಸಂಬಂಧಿಸಿದ ನಿರ್ಣಯದ ಸಮಾಲೋಚನೆಗಳಿಂದ ಭಾರತ ಹಾಗೂ ಇತರ ಸದಸ್ಯ ರಾಷ್ಟ್ರಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟ ಟರ್ಕಿಯ ನಿರ್ಧಾರಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಸಾಮಾನ್ಯ ಸಭೆಯಲ್ಲಿ ಇರಾಕ್ ಮಂಡಿಸಿದ ಈ ಕರಡು ನಿರ್ಣಯದ ವಿರುದ್ಧ ಭಾರತ ಮತ ಚಲಾಯಿಸಿದೆ.
ಮತದಾನದ ಮೂಲಕ ಅಂಗೀಕಾರಗೊಂಡ ಈ ನಿರ್ಣಯದ ಪರವಾಗಿ 112 ರಾಷ್ಟ್ರಗಳು ಮತ ಚಲಾಯಿಸಿದರೆ, 39 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು. ಭಾರತದೊಂದಿಗೆ ಅರ್ಮೇನಿಯಾ, ಸೈಪ್ರಸ್, ಗ್ರೀಸ್, ಇಸ್ರೇಲ್ ಮತ್ತು ಅಮೆರಿಕ ಸೇರಿದಂತೆ ಒಟ್ಟು ಆರು ರಾಷ್ಟ್ರಗಳು ಈ ನಿರ್ಣಯವನ್ನು ವಿರೋಧಿಸಿ ಮತ ಚಲಾಯಿಸಿವೆ.
ಈ ನಿರ್ಣಯದ ಪ್ರಕ್ರಿಯೆಯನ್ನು ಸುಗಮಗೊಳಿಸುವ ಜವಾಬ್ದಾರಿ ಹೊತ್ತಿದ್ದ ಟರ್ಕಿಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಕೊರತೆಯಿದೆ ಎಂದು ಭಾರತ, ಸೈಪ್ರಸ್ ಹಾಗೂ ಗ್ರೀಸ್ ದೇಶಗಳು ತೀವ್ರವಾಗಿ ಟೀಕಿಸಿವೆ. ಕರಡು ಪ್ರತಿಗಳನ್ನು ಹಂಚಿಕೆ ಮಾಡುವಾಗ ಭಾರತೀಯ ನಿಯೋಗ ಮತ್ತು ಇತರ ಹಲವು ದೇಶಗಳನ್ನು ಉದ್ದೇಶಪೂರ್ವಕವಾಗಿಯೇ ಹೊರಗಿಡಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಶಾಶ್ವತ ಪ್ರತಿನಿಧಿ ರಾಯಭಾರಿ ಯೋಜನಾ ಪಟೇಲ್ ಆರೋಪಿಸಿದ್ದಾರೆ.
ಮತದಾನದ ಬಳಿಕ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಯೋಜನಾ ಪಟೇಲ್, ನಿರ್ಣಯದ ವಿಷಯವಸ್ತುವಿನ ಜೊತೆಗೆ, ಮಾತುಕತೆಗಳನ್ನು ಆಯೋಜಿಸಿದವರು ಅನುಸರಿಸಿದ ಕಾರ್ಯವಿಧಾನಗಳೇ ಭಾರತ ವಿರುದ್ಧವಾಗಿ ಮತ ಚಲಾಯಿಸಲು ಪ್ರಮುಖ ಕಾರಣ ಎಂದು ತಿಳಿಸಿದರು. ಈ ಬೆಳವಣಿಗೆಯನ್ನು ಗಂಭೀರ ಮತ್ತು ಕಳವಳಕಾರಿ ವಿಷಯ ಎಂದು ಬಣ್ಣಿಸಿದ ಅವರು, ಇಡೀ ಪ್ರಕ್ರಿಯೆಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.