ಬಹರೈನ್ : ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಗಲ್ಫ್ ರಾಷ್ಟ್ರವಾದ ಬಹ್ರೇನ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ (ಐಆರ್ಜಿಸಿ) ಭಾನುವಾರ ಘೋಷಿಸಿದೆ. ದಾಳಿಯ ಬೆನ್ನಲ್ಲೇ ಬಹ್ರೇನ್ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಎಚ್ಚರಿಕೆಯ ಸೈರನ್ಗಳು ಮೊಳಗಿವೆ.
ಭಾನುವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 4:00 ಗಂಟೆಗೆ ಮೊದಲ ಸ್ಫೋಟದ ಸದ್ದು ಕೇಳಿಬಂದಿದ್ದು, ಬಳಿಕ ಬೆಳಿಗ್ಗೆ 6:30ರ ಸುಮಾರಿಗೆ ಎರಡನೇ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಬಹ್ರೇನ್ನ ಅಲ್ ರಿಫಾ ಹೆಲಿಕಾಪ್ಟರ್ ನೆಲೆಯಲ್ಲಿರುವ ಅಮೆರಿಕದ ವಾಯು ರಕ್ಷಣಾ ರೇಡಾರ್ ವ್ಯವಸ್ಥೆಯನ್ನು ಐಆರ್ಜಿಸಿ ಏರೋಸ್ಪೇಸ್ ಫೋರ್ಸ್ ಆರು ಡ್ರೋನ್ಗಳನ್ನು ಬಳಸಿ ಧ್ವಂಸಗೊಳಿಸಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.
ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಬಹ್ರೇನ್ ಆಂತರಿಕ ಸಚಿವಾಲಯವು ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ನಿವಾಸಿಗಳು ಶಾಂತವಾಗಿರಬೇಕು, ತಕ್ಷಣವೇ ಹತ್ತಿರದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಮತ್ತು ಅಧಿಕೃತ ಮಾಧ್ಯಮಗಳ ವರದಿಗಳನ್ನು ಮಾತ್ರ ನಂಬಬೇಕು ಎಂದು ಸರ್ಕಾರ ಮನವಿ ಮಾಡಿದೆ.
ಇನ್ನೊಂದೆಡೆ, ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದ್ದು, ಅಮೆರಿಕದ ಪ್ರತಿಯೊಂದು ಆಕ್ರಮಣಕ್ಕೂ ಇನ್ನೂ ಕಠಿಣ ಹಾಗೂ ಬಲವಾದ ಪ್ರತ್ಯುತ್ತರ ನೀಡಲಾಗುವುದು ಎಂದು ಇರಾನ್ ಎಚ್ಚರಿಕೆ ನೀಡಿದೆ.