image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾದ ಅಮಿಶ್ ಶಾ: ಸುಂಕ ಕಡಿತ, ಕೈಗೆಟುಕುವ ಆರೋಗ್ಯ ಸೇವೆಗೆ ಆದ್ಯತೆ

ಅಮೆರಿಕ ಕಾಂಗ್ರೆಸ್‌ಗೆ ಆಯ್ಕೆಯಾದ ಅಮಿಶ್ ಶಾ: ಸುಂಕ ಕಡಿತ, ಕೈಗೆಟುಕುವ ಆರೋಗ್ಯ ಸೇವೆಗೆ ಆದ್ಯತೆ

ವಾಷಿಂಗ್ಟನ್: ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ (ಪ್ರತಿನಿಧಿ ಸಭೆ) ನೂತನವಾಗಿ ಆಯ್ಕೆಯಾಗಿರುವ ಭಾರತೀಯ-ಅಮೆರಿಕನ್ ಅಮಿಶ್ ಶಾ, ತಮ್ಮ ಮುಂದಿನ ಕಾರ್ಯಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಸುಂಕಗಳನ್ನು ಹಿಂಪಡೆಯುವುದು, ಯುಎಸ್ ಕಾಂಗ್ರೆಸ್‌ನ ಅಧಿಕಾರವನ್ನು ಮರುಸ್ಥಾಪಿಸುವುದು ಮತ್ತು ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದು ತಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 3ರ ಮಧ್ಯಂತರ ಚುನಾವಣೆಯಲ್ಲಿ ಅರಿಜೋನಾದ ಮೊದಲ ಕಾಂಗ್ರೆಷನಲ್ ಜಿಲ್ಲೆಯಿಂದ ಆಯ್ಕೆಯಾಗಿರುವ ಶಾ, ಕ್ಯಾಪಿಟಲ್ ಹಿಲ್‌ನಲ್ಲಿ ಭಾರತೀಯ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಅಮೆರಿಕದ ವಿವಿಧ ಕ್ಷೇತ್ರಗಳಿಗೆ ವಲಸೆ ಸಮುದಾಯಗಳು ಮಹತ್ವದ ಕೊಡುಗೆ ನೀಡುತ್ತಿದ್ದರೂ, ಅವರ ವಿರುದ್ಧ ದ್ವೇಷಪೂರಿತ ಘಟನೆಗಳು ಹೆಚ್ಚುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಮತ್ತು ವಲಸಿಗರಿಗೆ ನೈತಿಕ ಬೆಂಬಲ ನೀಡಲು ತಮ್ಮ ಹೊಸ ಸ್ಥಾನವನ್ನು ಬಳಸಿಕೊಳ್ಳುವುದಾಗಿ ಅವರು ಭರವಸೆ ನೀಡಿದರು. ಅಮೆರಿಕದ ಜನರು ಆರ್ಥಿಕತೆ ಮತ್ತು ದೈನಂದಿನ ವೆಚ್ಚಗಳನ್ನು ನಿಯಂತ್ರಿಸುವತ್ತ ಗಮನಹರಿಸಬೇಕೆಂದು ಬಯಸುತ್ತಿದ್ದಾರೆ. ವಿಮಾ ಪ್ರೀಮಿಯಂಗಳನ್ನು ಕಡಿಮೆ ಮಾಡಿ, ಎಲ್ಲರಿಗೂ ಆರೋಗ್ಯ ವಿಮಾ ರಕ್ಷಣೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಅವರು ಹೇಳಿದರು.

ಟ್ರಂಪ್ ಆಡಳಿತ ವಿಧಿಸಿರುವ ಸುಂಕಗಳಿಂದ ಭಾರತೀಯ-ಅಮೆರಿಕನ್ ಸಮುದಾಯ, ವಿಶೇಷವಾಗಿ ರತ್ನ ಮತ್ತು ಆಭರಣ ವಲಯದ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಉದ್ಯಮಿಗಳು ಈಗಾಗಲೇ ತಮ್ಮ ಬಳಿ ಬಂದು ಅಹವಾಲುಗಳನ್ನು ಸಲ್ಲಿಸಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಮೊದಲ ಆದ್ಯತೆ ನೀಡುವುದಾಗಿ ಶಾ ಸ್ಪಷ್ಟಪಡಿಸಿದರು.

2027ರ ಜನವರಿ 3ರಂದು ಆರಂಭವಾಗಿ 2029ರ ಜನವರಿ 3ರವರೆಗೆ ನಡೆಯಲಿರುವ 120ನೇ ಯುಎಸ್ ಕಾಂಗ್ರೆಸ್‌ನಲ್ಲಿ ಶಾ ಕಾರ್ಯನಿರ್ವಹಿಸಲಿದ್ದಾರೆ. ಅರಿಜೋನಾ ರಾಜ್ಯ ವಿಧಾನಸಭೆಯಲ್ಲಿ ಮೂರು ಅವಧಿಗೆ ಶಾಸಕರಾಗಿ ಕೆಲಸ ಮಾಡಿದ ಅನುಭವ ತಮಗಿದೆ ಎಂದು ಸ್ಮರಿಸಿದ ಅವರು, ರಿಪಬ್ಲಿಕನ್ ಬಹುಮತವಿದ್ದರೂ ಕಳೆದ ಒಂದು ದಶಕದಲ್ಲಿ ಬೇರೆ ಯಾವುದೇ ಡೆಮಾಕ್ರಟಿಕ್ ಶಾಸಕರಿಗಿಂತ ಹೆಚ್ಚು ಮಸೂದೆಗಳನ್ನು ಕಾನೂನಾಗಿ ಜಾರಿಗೆ ತರುವಲ್ಲಿ ತಾವು ಯಶಸ್ವಿಯಾಗಿದ್ದಾಗಿ ತಿಳಿಸಿದರು. ಅದೇ ರೀತಿ ಯುಎಸ್ ಕಾಂಗ್ರೆಸ್‌ನಲ್ಲೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎರಡೂ ಪಕ್ಷಗಳ ಸಹಕಾರದೊಂದಿಗೆ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ ಎಂದು ಅಮಿಶ್ ಶಾ ಹೇಳಿದರು.

Category
ಕರಾವಳಿ ತರಂಗಿಣಿ