ಅಮೇರಿಕ : ಇರಾನ್‌ನ ಪರಮಾಣು ಯೋಜನೆ, ಸೌಲಭ್ಯಗಳು, ಉಪಕರಣಗಳು ಮತ್ತು ವಿಜ್ಞಾನಿಗಳು ಸೇರಿದಂತೆ ಪ್ರಮುಖ ಸಿಬ್ಬಂದಿಯ ಚಲನವಲನಗಳ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 20 ಮಿಲಿಯನ್ ಡಾಲರ್ (ಸುಮಾರು ₹188 ಕೋಟಿಗೂ ಹೆಚ್ಚು) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ. ಅಮೆರಿಕದ ವಿದೇಶಾಂಗ ಇಲಾಖೆಯ 'ರಿವಾರ್ಡ್ಸ್ ಫಾರ್ ಜಸ್ಟಿಸ್' ಕಾರ್ಯಕ್ರಮದಡಿ ಈ ಆಫರ್ ನೀಡಲಾಗಿದ್ದು, ಮಾಹಿತಿ ನೀಡುವ ವ್ಯಕ್ತಿ ಮತ್ತು ಅವರ ಕುಟುಂಬಕ್ಕೆ ಬೇರೆಡೆ ಸುರಕ್ಷಿತವಾಗಿ ನೆಲೆಸಲು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಲಾಗಿದೆ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಭದ್ರತಾ ಮಾನದಂಡಗಳನ್ನು ಪಾಲಿಸುವಲ್ಲಿ ಇರಾನ್ ಅಸಹಕಾರ ತೋರುತ್ತಿದ್ದು, ತಪಾಸಣೆ ಮತ್ತು ನಿಗಾ ವಹಿಸುವ ಪ್ರಕ್ರಿಯೆಯನ್ನು ಸೀಮಿತಗೊಳಿಸಿದೆ ಎಂದು ಯುಎಸ್ ಆರೋಪಿಸಿದೆ. ಇರಾನ್ ಈಗಾಗಲೇ ಯುರೇನಿಯಂ ಅನ್ನು ಶೇಕಡಾ 60ರಷ್ಟು ಸಂಸ್ಕರಿಸಿದ್ದು, ಶಸ್ತ್ರಾಸ್ತ್ರ ದರ್ಜೆಯ 90 ಪ್ರತಿಶತ ಮಟ್ಟವನ್ನು ತಲುಪಲು ಕೇವಲ ಒಂದು ಸಣ್ಣ ತಾಂತ್ರಿಕ ಹಂತ ಮಾತ್ರ ಬಾಕಿ ಇದೆ. ಪರಮಾಣು ಅಸ್ತ್ರ ಹೊಂದಿಲ್ಲದ ದೇಶಗಳ ಪೈಕಿ ಇಷ್ಟು ಹೆಚ್ಚಿನ ಮಟ್ಟದಲ್ಲಿ ಯುರೇನಿಯಂ ಸಂಸ್ಕರಿಸುತ್ತಿರುವ ಏಕೈಕ ದೇಶ ಇರಾನ್ ಆಗಿದೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಕತಾರ್ ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಲು ಯತ್ನಿಸುತ್ತಿರುವ ಬೆನ್ನಲ್ಲೇ ಸೆಂಟ್ ಕಾಮ್ (CENTCOM) ಮೂಲಕ ಈ ಘೋಷಣೆ ಹೊರಬಿದ್ದಿದೆ.