ಕೀವ್: ದಕ್ಷಿಣ ಉಕ್ರೇನ್ ಮೇಲೆ ರಷ್ಯಾ ಸೇನೆ ಸೋಮವಾರ ಭೀಕರ ಬಾಂಬ್ ದಾಳಿ ನಡೆಸಿದ್ದು, ಮಾನವೀಯ ನೆರವು ವಿತರಣಾ ಕೇಂದ್ರ ಹಾಗೂ ಅದರ ಪಕ್ಕದಲ್ಲಿದ್ದ ತಾತ್ಕಾಲಿಕ ಆಶ್ರಯ ತಾಣ ಸಂಪೂರ್ಣವಾಗಿ ನಾಶವಾಗಿದೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 26 ಮಂದಿ ನಾಗರಿಕರು ಉಸಿರು ಚೆಲ್ಲಿದ್ದು, 27 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ದಕ್ಷಿಣ ಉಕ್ರೇನ್ನ ಝಪೊರಿಝಿಯಾ ಪ್ರದೇಶದ ಕೊಮಿಶುವಖಾ ಗ್ರಾಮದಲ್ಲಿ ಈ ವಿನಾಶಕಾರಿ ದಾಳಿ ಸಂಭವಿಸಿದೆ. ರಷ್ಯಾದ ಸೇನೆಯು ಸುಮಾರು 3,000 ಕೆಜಿ ತೂಕದ ಒಂಬತ್ತು ವೈಮಾನಿಕ ಬಾಂಬ್ಗಳನ್ನು ಈ ಪ್ರದೇಶದ ಮೇಲೆ ಹಾಕಿದೆ ಎಂದು ಪ್ರಾದೇಶಿಕ ಮುಖ್ಯಸ್ಥ ಮೈಖೈಲೊ ಸೆಮಿಕಿನ್ ತಿಳಿಸಿದ್ದಾರೆ. ದಾಳಿಯ ತೀವ್ರತೆಗೆ ಸಂತ್ರಸ್ತರಿಗೆ ಆಹಾರ ಮತ್ತು ನೆರವು ನೀಡುತ್ತಿದ್ದ ಕೇಂದ್ರ ಹಾಗೂ ಶಾಲಾ ಕಟ್ಟಡದ ಆಶ್ರಯ ತಾಣ ಧೂಳಿಪಟವಾಗಿದೆ.
ದಾಳಿ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿರುವ ಉಕ್ರೇನಿಯನ್ ತುರ್ತು ರಕ್ಷಣಾ ಪಡೆಗಳು ಮತ್ತು ಪೊಲೀಸರು ಕಟ್ಟಡದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಹಾಗೂ ಧರೆಗುರುಳಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ಝಪೊರಿಝಿಯಾ ಪ್ರದೇಶದಲ್ಲಿ ಶೋಕಾಚರಣೆ ಘೋಷಿಸಲಾಗಿದೆ. ಇದೇ ವೇಳೆ ಖೆರ್ಸನ್ನಲ್ಲಿ ಜಾರಿಯಲ್ಲಿದ್ದ ಸೀಮಿತ ಕದನ ವಿರಾಮ ಒಪ್ಪಂದ ಸೋಮವಾರಕ್ಕೆ ಮುಕ್ತಾಯಗೊಂಡ ಬೆನ್ನಲ್ಲೇ ರಷ್ಯಾ ಈ ದಾಳಿ ನಡೆಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ದಾಳಿಯನ್ನು "ಅತ್ಯಂತ ಕ್ರೂರ ಮತ್ತು ಅಮಾನವೀಯ" ಎಂದು ಬಣ್ಣಿಸಿದ್ದಾರೆ. ರಷ್ಯಾದ ತೈಲ ಹಾಗೂ ಅನಿಲ ಆದಾಯದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡ ಹೇರಬೇಕೆಂದು ಅವರು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ. ಉಕ್ರೇನ್ನ ಇತರ ಭಾಗಗಳ ಮೇಲೆಯೂ ರಷ್ಯಾ ಡ್ರೋನ್ ದಾಳಿಗಳನ್ನು ಮುಂದುವರಿಸಿದ್ದು, ಹಲವು ನಾಗರಿಕರು ಗಾಯಗೊಂಡಿದ್ದಾರೆ. ಈ ಘಟನೆಯ ಕುರಿತು ರಷ್ಯಾ ಸೇನೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.