image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಜರ್ಮನಿಯಲ್ಲಿ ಉಗ್ರ ಸ್ವರೂಪ ಪಡೆದ ಜೆನ್ ಜಿ ಪ್ರತಿಭಟನೆ: ಫ್ರಾಂಕ್‌ಫರ್ಟ್‌ನಲ್ಲಿ ವ್ಯಾಪಕ ಹಿಂಸಾಚಾರ ಮತ್ತು ಲೂಟಿ

ಜರ್ಮನಿಯಲ್ಲಿ ಉಗ್ರ ಸ್ವರೂಪ ಪಡೆದ ಜೆನ್ ಜಿ ಪ್ರತಿಭಟನೆ: ಫ್ರಾಂಕ್‌ಫರ್ಟ್‌ನಲ್ಲಿ ವ್ಯಾಪಕ ಹಿಂಸಾಚಾರ ಮತ್ತು ಲೂಟಿ

ಜರ್ಮನಿ : ಯುರೋಪ್ ಖಂಡದ ಪ್ರಮುಖ ದೇಶವಾದ ಜರ್ಮನಿಯು ‘ಜೆನ್ ಜಿ’ (Gen Z) ಯುವಜನರ ಬೃಹತ್ ಹೋರಾಟದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ದೇಶದ ಆರ್ಥಿಕ ಕೇಂದ್ರವೆನಿಸಿದ ಫ್ರಾಂಕ್‌ಫರ್ಟ್ ನಗರದಲ್ಲಿ ಸನ್ನಿವೇಶವು ಅತ್ಯಂತ ಭೀಕರ ಹಾಗೂ ನಿಯಂತ್ರಣ ತಪ್ಪಿದ ಹಂತಕ್ಕೆ ತಲುಪಿದ್ದು, ನಗರದಾದ್ಯಂತ ವ್ಯಾಪಕ ಹಿಂಸಾಚಾರ ವರದಿಯಾಗಿದೆ.

ಆರಂಭದಲ್ಲಿ ಶಾಂತಿಯುತವಾಗಿದ್ದ ಯುವಕರ ಪ್ರತಿಭಟನಾ ಮೆರವಣಿಗೆಯ ದುರುಪಯೋಗ ಪಡೆದುಕೊಂಡ ಮುಸುಕುಧಾರಿ ಗಲಭೆಕೋರರು, ಸಂಜೆಯಾಗುತ್ತಿದ್ದಂತೆ ರಸ್ತೆಗಿಳಿದು ಹಿಂಸಾಚಾರ ನಡೆಸಿದ್ದಾರೆ. ಫ್ರಾಂಕ್‌ಫರ್ಟ್‌ನ ಪ್ರಮುಖ ವಾಣಿಜ್ಯ ಬೀದಿಗಳಲ್ಲಿ ಸ್ಥಾಪಿತವಾಗಿರುವ ಸಾಲು ಸಾಲು ಬ್ರ್ಯಾಂಡೆಡ್ ಅಂಗಡಿಗಳು, ಶೋರೂಮ್‌ಗಳು ಮತ್ತು ಮಳಿಗೆಗಳ ಗಾಜುಗಳನ್ನು ಒಡೆದು ಹಾಕಿ, ಒಳಗಿದ್ದ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳಿಗೆ ಬೆಂಕಿ ಹಚ್ಚಿ, ಭದ್ರತಾ ಸಿಬ್ಬಂದಿಯ ಮೇಲೆ ಪಟಾಕಿ, ಕಲ್ಲು ಹಾಗೂ ಮೋಟೋವ್ ಕಾಕ್ಟೇಲ್ (ಪೆಟ್ರೋಲ್ ಬಾಂಬ್) ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಗ್ರ ಸ್ವರೂಪ ಪಡೆದ ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ಹಿಂಸೆಯನ್ನು ಹತೋಟಿಗೆ ತರಲು ಪೊಲೀಸರು ಕಣ್ಣೀರು ಅನಿಲ ಹಾಗೂ ಬಲವಾದ ಜಲ ಫಿರಂಗಿಗಳನ್ನು (Water Cannons) ಪ್ರಯೋಗಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಸಾರ್ವಜನಿಕರಿಗೆ ನಗರದ ಕೇಂದ್ರಭಾಗಕ್ಕೆ ಬರದಂತೆ ಸೂಚನೆ ನೀಡಿ, ಇಡೀ ಪ್ರದೇಶವನ್ನು ತಡೆಗೋಡೆಗಳಿಂದ ಬಂದ್ ಮಾಡಿದ್ದಾರೆ. ಈ ಘರ್ಷಣೆಗಳಲ್ಲಿ ಹತ್ತಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

'ಜೆನ್ ಜಿ ರೇಗೆಲ್ಟ್' (Gen Z Regelt) ಎಂಬ ಸಂಘಟನೆಯ ನೇತೃತ್ವದಲ್ಲಿ ಜರ್ಮನಿಯ ಬರ್ಲಿನ್, ಕೊಲೋನ್, ಹ್ಯಾಂಬರ್ಗ್ ಹಾಗೂ ಮುನಿಚ್ ಸೇರಿದಂತೆ ಸುಮಾರು 34ಕ್ಕೂ ಹೆಚ್ಚು ನಗರಗಳಲ್ಲಿ ಲಕ್ಷಾಂತರ ಯುವಕರು ಒಂದಾಗಿ ಈ ಬೃಹತ್ ಚಳವಳಿ ನಡೆಸುತ್ತಿದ್ದಾರೆ. ನಿರಂತರವಾಗಿ ಏರುತ್ತಿರುವ ಜೀವನ ವೆಚ್ಚ (Cost of living), ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿತ, ಉದ್ಯೋಗ ಅಭದ್ರತೆ ಹಾಗೂ ಜರ್ಮನಿ ಸರ್ಕಾರ ಸೇನಾ ವೆಚ್ಚವನ್ನು ಹೆಚ್ಚಿಸುತ್ತಿರುವುದನ್ನು ವಿರೋಧಿಸಿ ಯುವಜನತೆ ರಸ್ತೆಗಿಳಿದಿದ್ದಾರೆ. ಜರ್ಮನಿ ಮಾತ್ರವಲ್ಲದೆ ಫ್ರಾನ್ಸ್ ಸೇರಿದಂತೆ ಯುರೋಪ್‌ನ ಇತರ ದೇಶಗಳಲ್ಲೂ ಇದೇ ಮಾದರಿಯ ಯುವ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಇಡೀ ಯೂರೋಪ್ ಖಂಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Category
ಕರಾವಳಿ ತರಂಗಿಣಿ