image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ನೇಪಾಳ ಜೈಲು ತೂತು ಮಾಡಿ ಕೈದಿಗಳ ಪರಾರಿ ಹಾಗೂ ಜೋಗ್ಬಾನಿ ಗಡಿ ಬಳಿ ಬಾಂಬ್ ಸ್ಫೋಟ: ಭಾರತ-ನೇಪಾಳ ಗಡಿಯಲ್ಲಿ ರೆಡ್ ಅಲರ್ಟ್

ನೇಪಾಳ ಜೈಲು ತೂತು ಮಾಡಿ ಕೈದಿಗಳ ಪರಾರಿ ಹಾಗೂ ಜೋಗ್ಬಾನಿ ಗಡಿ ಬಳಿ ಬಾಂಬ್ ಸ್ಫೋಟ: ಭಾರತ-ನೇಪಾಳ ಗಡಿಯಲ್ಲಿ ರೆಡ್ ಅಲರ್ಟ್

ನೇಪಾಳ : ನೇಪಾಳದಲ್ಲಿ ನಡೆದ ಎರಡು ಪ್ರತ್ಯೇಕ ಹಾಗೂ ಗಂಭೀರ ಘಟನೆಗಳು ಭಾರತ-ನೇಪಾಳ ಗಡಿಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿವೆ. ನೇಪಾಳದ ಕರ್ನಾಲಿ ಪ್ರಾಂತ್ಯಕ್ಕೆ ಸೇರಿದ ಡೊಲ್ಪಾ ಜಿಲ್ಲಾ ಜೈಲಿನಿಂದ ಎಂಟು ಮಂದಿ ಕೈದಿಗಳು ಸುರಂಗ ತೋಡಿ ಪರಾರಿಯಾಗಿರುವ ಘಟನೆ ಹಾಗೂ ಅದರ ಬೆನ್ನಲ್ಲೇ ಬಿಹಾರಕ್ಕೆ ಹೊಂದಿಕೊಂಡಂತಿರುವ ಬಿರಾತ್‌ನಗರದಲ್ಲಿ ನಡೆದ ಶಂಕಿತ ಬಾಂಬ್ ಸ್ಫೋಟದಿಂದಾಗಿ ಎರಡೂ ದೇಶಗಳ ಗಡಿ ಭಾಗದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ನೇಪಾಳದ ಡೊಲ್ಪಾ ಜಿಲ್ಲಾ ಜೈಲಿನಲ್ಲಿ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಕೈದಿಗಳು ತಮ್ಮ ಬ್ಯಾರಾಕ್‌ನಿಂದ 12 ರಿಂದ 15 ಅಡಿ ಉದ್ದದ ಸುರಂಗವನ್ನು ತೋಡಿ ಪರಾರಿಯಾಗಿದ್ದಾರೆ. ತಪ್ಪಿಸಿಕೊಂಡಿರುವ ಎಂಟು ಕೈದಿಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ಅಪರಾಧಿಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಡೊಲ್ಪಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ರಾಜ್ ಗಿರಿ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದ್ದು, ನೇಪಾಳ ಪೊಲೀಸರು ಗಡಿ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.

ಜೈಲು ಪರಾರಿಯ ಬೆನ್ನಲ್ಲೇ ಬಿಹಾರದ ಅರರಿಯಾ ಜಿಲ್ಲೆಯ ಜೋಗ್ಬಾನಿ ಗಡಿಗೆ ತೀರಾ ಹತ್ತಿರವಿರುವ ನೇಪಾಳದ ಬಿರಾತ್‌ನಗರ (ಮೋರಂಗ್ ಜಿಲ್ಲೆ) ವಾರ್ಡ್ ಸಂಖ್ಯೆ 15 ರ ಜೂಟ್ ಮಿಲ್ ಹಿಂಭಾಗದಲ್ಲಿ ಶಂಕಿತ ಬಾಂಬ್ ಸ್ಫೋಟ ಸಂಭವಿಸಿದೆ. ತ್ಯಾಜ್ಯ ಸಾಗಣೆಯ ವೇಳೆ ಸಂಭವಿಸಿದ ಈ ಧಮಾಕಾದಲ್ಲಿ ಇಬ್ಬರು ಸಾರ್ವಜನಿಕರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೋಗ್ಬಾನಿ ಪ್ರಮುಖ ಗಡಿ ಪ್ರದೇಶವಾಗಿರುವುದರಿಂದ ಈ ಘಟನೆಯು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.

ನೇಪಾಳದಿಂದ ಅಪರಾಧಿಗಳು ಭಾರತೀಯ ಪ್ರದೇಶಕ್ಕೆ ನುಸುಳುವ ಸಾಧ್ಯತೆಯನ್ನು ಮನಗಂಡು ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಮತ್ತು ಸ್ಥಳೀಯ ಪೊಲೀಸರು ಗಡಿಯುದ್ದಕ್ಕೂ ಕಟ್ಟುನಿಟ್ಟಿನ ಕಣ್ಗಾವಲು ಹೆಚ್ಚಿಸಿದ್ದಾರೆ. ಬಿಹಾರದ ಮೋತಿಹಾರಿ (ರಕ್ಸೌಲ್) ಹಾಗೂ ಅರರಿಯಾ ಗಡಿ ಪ್ರದೇಶಗಳಲ್ಲಿ ಪಟ್ರೋಲಿಂಗ್ ಚುರುಕುಗೊಳಿಸಲಾಗಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕ ಭದ್ರತೆಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಗಡಿ ದಾಟಿ ಬರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ವಾಹನಗಳ ಸಘನ ತಪಾಸಣೆ ನಡೆಸಲಾಗುತ್ತಿದೆ. ಪ್ರಸ್ತುತ ಎರಡೂ ಘಟನೆಗಳ ನಡುವೆ ಯಾವುದೇ ನೇರ ಸಂಬಂಧವಿರುವುದು ದೃಢಪಟ್ಟಿಲ್ಲವಾದರೂ, ಭದ್ರತಾ ದೃಷ್ಟಿಯಿಂದ ಬಿಹಾರ ಮತ್ತು ಉತ್ತರ ಪ್ರದೇಶದ ಭಾರತ-ನೇಪಾಳ ಗಡಿಯುದ್ದಕ್ಕೂ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Category
ಕರಾವಳಿ ತರಂಗಿಣಿ