image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಯುಎನ್‌ಎಸ್‌ಸಿಯಲ್ಲಿ ವೀಟೊ ಇಲ್ಲದ ಖಾಯಂ ಸದಸ್ಯತ್ವಕ್ಕೆ ಭಾರತ ವಿರೋಧ: ಎರಡನೇ ದರ್ಜೆ ವರ್ಗ ಸೃಷ್ಟಿಗೆ ಅಸಮಾಧಾನ

ಯುಎನ್‌ಎಸ್‌ಸಿಯಲ್ಲಿ ವೀಟೊ ಇಲ್ಲದ ಖಾಯಂ ಸದಸ್ಯತ್ವಕ್ಕೆ ಭಾರತ ವಿರೋಧ: ಎರಡನೇ ದರ್ಜೆ ವರ್ಗ ಸೃಷ್ಟಿಗೆ ಅಸಮಾಧಾನ

ನವದೆಹಲಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ವೀಟೋ ಅಧಿಕಾರವಿಲ್ಲದ ಹೊಸ ಖಾಯಂ ಸದಸ್ಯರ ವರ್ಗವನ್ನು ಸೃಷ್ಟಿಸುವುದು ನೂತನವಾಗಿ ಸೇರ್ಪಡೆಯಾಗುವ ದೇಶಗಳನ್ನು 'ಎರಡನೇ ದರ್ಜೆಯ' ಸದಸ್ಯರನ್ನಾಗಿ ತಳ್ಳಿದಂತೆ ಎಂದು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಭಾರತದ ಕಾಯಂ ಪ್ರತಿನಿಧಿ ಹಾಗೂ ರಾಯಭಾರಿ ಹರೀಶ್ ಪರ್ವತನೇನಿ ಅವರು ಭಾರತದ ತತ್ವಬದ್ಧ ನಿಲುವನ್ನು ಸ್ಪಷ್ಟಪಡಿಸಿದರು. ವೀಟೋ ಅಧಿಕಾರವಿಲ್ಲದ ದೀರ್ಘಾವಧಿಯ ಸದಸ್ಯರ ಪ್ರತ್ಯೇಕ ವರ್ಗವನ್ನು ಸೃಷ್ಟಿಸುವುದರಿಂದ ಪ್ರಸ್ತುತ ಇರುವ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದು ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ (P5) ಎಂಬ ಐದು ಖಾಯಂ ಸದಸ್ಯರ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಎಚ್ಚರಿಸಿದರು.

ನ್ಯಾಯಸಮ್ಮತತೆ ಮತ್ತು ಸಮಾನತೆಯ ದೃಷ್ಟಿಯಿಂದ, ಮಂಡಳಿಯಲ್ಲಿ ವೀಟೋ ಅಧಿಕಾರ ಇರುವವರೆಗೆ ಹೊಸದಾಗಿ ಸೇರ್ಪಡೆಯಾಗುವ ಎಲ್ಲ ಖಾಯಂ ಸದಸ್ಯರಿಗೂ ಈ ಹಕ್ಕು ದೊರೆಯಬೇಕು ಎಂದು ಭಾರತ ಪ್ರತಿಪಾದಿಸಿದೆ. 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಖಾಯಂ ಹಾಗೂ ಖಾಯಂ ಅಲ್ಲದ ಎರಡೂ ವಿಭಾಗಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ತಕ್ಷಣವೇ ಅರ್ಥಪೂರ್ಣ ಸುಧಾರಣೆ ತರಬೇಕಿದೆ. 1945ರಲ್ಲಿ ಸ್ಥಾಪನೆಯಾದ ಈ ಮಂಡಳಿಯು ಇಂದಿನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ರಾಯಭಾರಿ ಸ್ಪಷ್ಟಪಡಿಸಿದರು.

ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಭಾರತ, 2028-29ರ ಅವಧಿಗೆ ಖಾಯಂ ಅಲ್ಲದ ಸದಸ್ಯತ್ವ ಪಡೆಯಲು ಸಹ ಸ್ಪರ್ಧಿಸುತ್ತಿದೆ. ಏಷ್ಯಾ-ಪೆಸಿಫಿಕ್ ಗುಂಪಿನ ಏಕೈಕ ಸ್ಥಾನಕ್ಕಾಗಿ ತಜಿಕಿಸ್ತಾನದ ವಿರುದ್ಧ ಭಾರತ ಸ್ಪರ್ಧಿಸಲಿದ್ದು, ಈ ಚುನಾವಣೆಯು 2027ರ ಜೂನ್‌ನಲ್ಲಿ ನಡೆಯಲಿದೆ. ಭಾರತವು ಹಿಂದೆ 2021-22 ಸೇರಿದಂತೆ ಒಟ್ಟು 8 ಬಾರಿ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯತ್ವವನ್ನು ವಹಿಸಿಕೊಂಡಿತ್ತು.

Category
ಕರಾವಳಿ ತರಂಗಿಣಿ