image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಟಿಬೆಟ್‌ ಹಾಗೂ ಚೀನಾದ ಕ್ವಿಂಗ್ಹೈನಲ್ಲಿ ಪ್ರಬಲ ಭೂಕಂಪ: 16 ಸಾವು, 76 ಮಂದಿಗೆ ಗಾಯ

ಟಿಬೆಟ್‌ ಹಾಗೂ ಚೀನಾದ ಕ್ವಿಂಗ್ಹೈನಲ್ಲಿ ಪ್ರಬಲ ಭೂಕಂಪ: 16 ಸಾವು, 76 ಮಂದಿಗೆ ಗಾಯ

ಟಿಬೆಟ್‌ : ಟಿಬೆಟ್‌ನಲ್ಲಿ 7.0 ತೀವ್ರತೆಯ ಭೀಕರ ಭೂಕಂಪ ಸಂಭವಿಸಿ 16 ಜನರು ಪ್ರಾಣ ಕಳೆದುಕೊಂಡು 76 ಜನರು ಗಾಯಗೊಂಡ ಬೆನ್ನಲ್ಲೇ, ಚೀನಾದ ಕ್ವಿಂಗ್ಹೈ ಪ್ರಾಂತ್ಯದಲ್ಲೂ ಶನಿವಾರ 5.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ.

ವಾಯುವ್ಯ ಚೀನಾದ ಕ್ವಿಂಗ್ಹೈ ಪ್ರಾಂತ್ಯದ ಝಡೋಯ್ ಕೌಂಟಿಯಲ್ಲಿ ಸಂಜೆ 4:39ಕ್ಕೆ ಭೂಮಿಯ ಅಂತರಾಳದಲ್ಲಿ 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ ಎಂದು ಚೀನಾ ಭೂಕಂಪ ಜಾಲ ಕೇಂದ್ರ ತಿಳಿಸಿದೆ. ಈ ಘಟನೆಯಲ್ಲಿ ತಕ್ಷಣಕ್ಕೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ. ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ನಿರಂತರ ಘರ್ಷಣೆಯಿಂದಾಗಿ ಟಿಬೆಟಿಯನ್ ಪ್ರಸ್ಥಭೂಮಿಯು ಹೆಚ್ಚು ಭೂಕಂಪನ ಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿದೆ.

ಮತ್ತೊಂದೆಡೆ, ಟಿಬೆಟ್ ಸ್ವಾಯತ್ತ ಪ್ರದೇಶದ ನಾಗ್ಕ್ ನಗರದ ಬಕೆನ್ ಕೌಂಟಿಯಲ್ಲಿ ಗುರುವಾರ ರಾತ್ರಿ 10:33ಕ್ಕೆ ಸಂಭವಿಸಿದ 7.0 ತೀವ್ರತೆಯ ಭೂಕಂಪದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ಇಲ್ಲಿಯವರೆಗೆ 12,489 ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ವಿಪತ್ತು ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಬೆಂಬಲ, ಸಂವಹನ ಹಾಗೂ ಚಿತ್ರಣಕ್ಕಾಗಿ ಉಪಗ್ರಹಗಳು ಮತ್ತು ಡ್ರೋನ್‌ಗಳನ್ನು (UAV) ನಿಯೋಜಿಸಲಾಗಿದೆ. ಪ್ರಮುಖ ಭೂಕಂಪದ ಬಳಿಕ 834 ಮರುಕಂಪನಗಳು (ಅಫ್ಟರ್‌ಶಾಕ್ಸ್) ದಾಖಲಾಗಿದ್ದು, ಅವುಗಳಲ್ಲಿ ಎಂಟು ಕಂಪನಗಳು 4.0 ರಿಂದ 4.9 ರಷ್ಟು ತೀವ್ರತೆ ಹೊಂದಿದ್ದವು.

ಗಾಯಗೊಂಡ 76 ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದ್ದು, ತೀವ್ರವಾಗಿ ಗಾಯಗೊಂಡಿದ್ದ 11 ಜನರಲ್ಲಿ ಐವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಸಂತ್ರಸ್ತರಿಗಾಗಿ 35 ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, 4,651 ಟೆಂಟ್‌ಗಳು, 2,000 ಪೂರ್ವನಿರ್ಮಿತ ಮನೆಗಳು, 11,772 ಹಾಸಿಗೆಗಳು, 5,715 ಹೊದಿಕೆಗಳು ಸೇರಿದಂತೆ ಶೀತ ಹವಾಮಾನಕ್ಕೆ ಅಗತ್ಯವಾದ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.

Category
ಕರಾವಳಿ ತರಂಗಿಣಿ