ಅಮೆರಿಕ : ಅಮೆರಿಕದ ಫ್ಲೋರಿಡಾ ರಾಜ್ಯದ ತಲ್ಲಹಸ್ಸಿ ನಗರದಲ್ಲಿ ಶನಿವಾರ ತಡರಾತ್ರಿ ಭೀಕರ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಆರು ಮಂದಿ ಅಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಫ್ಲೋರಿಡಾ ಎ ಅಂಡ್ ಎಂ ವಿಶ್ವವಿದ್ಯಾಲಯದ (FAMU) ಬ್ರಾಗ್ ಮೆಮೋರಿಯಲ್ ಕ್ರೀಡಾಂಗಣದ ಸಮೀಪ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡ 12 ಮಂದಿಯ ಪೈಕಿ 11 ಜನರಿಗೆ ನೇರವಾಗಿ ಗುಂಡೇಟು ತಗುಲಿದೆ ಎಂದು ಪೊಲೀಸರು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳಲ್ಲಿ ಕನಿಷ್ಠ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ಒಂಬತ್ತು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ತಲ್ಲಹಸ್ಸಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಗುಂಡಿನ ದಾಳಿ ನಡೆಯುವ ಮುನ್ನ ಸ್ಥಳದಲ್ಲಿ ಗುಂಪುಗಳ ನಡುವೆ ತೀವ್ರ ಜಗಳ ನಡೆದಿತ್ತು. ಈ ಜಗಳವೇ ಮಾರಣಾಂತಿಕ ಗುಂಡಿನ ದಾಳಿಗೆ ಕಾರಣವಾಗಿರಬಹುದು ಎಂಬ ಶಂಕೆಯಿದ್ದು, ತನಿಖೆ ವೇಗವಾಗಿ ಮುಂದುವರಿದಿದೆ. ದಾಳಿಕೋರರ ಪತ್ತೆಗೆ ಮತ್ತು ಘಟನೆಗೆ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸರಣಿ ಗುಂಡಿನ ದಾಳಿಗಳು ಹೆಚ್ಚಾಗುತ್ತಿರುವುದು ಅಮೆರಿಕದಲ್ಲಿ ಮತ್ತೆ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.