ಟೋಕಿಯೋ: ಜಪಾನ್‌ನ ಜಪಾನ್ ಬಾಹ್ಯಾಕಾಶ ಅನ್ವೇಷಣಾ ಏಜೆನ್ಸಿ (ಜಾಕ್ಸಾ) ಚಂದ್ರನ ಅನ್ವೇಷಣೆ ಮತ್ತು ಅಲ್ಲಿನ ಮಾದರಿಗಳನ್ನು ಹೊತ್ತು ತರುವ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನೌಕೆಯನ್ನು ನಭಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ತನೆಗಾಶಿಮಾ ದ್ವೀಪದಲ್ಲಿರುವ ದೇಶದ ಮುಖ್ಯ ಬಾಹ್ಯಾಕಾಶ ನಿಲ್ದಾಣದಿಂದ ಚಿಮ್ಮಿದ ಈ ನೌಕೆಯು ಉಡಾವಣೆಗೊಂಡ ಒಂದು ಗಂಟೆಯ ನಂತರ ಯೋಜಿಸಿದಂತೆ ರಾಕೆಟ್‌ನ ಮೇಲಿನ ಹಂತದಿಂದ ಬೇರ್ಪಟ್ಟಿರುವುದು ವಿಜ್ಞಾನಿಗಳ ಹರ್ಷಕ್ಕೆ ಕಾರಣವಾಗಿದೆ. ವಿಶ್ವದ ವಿವಿಧ ಬಾಹ್ಯಾಕಾಶ ಸಂಸ್ಥೆಗಳ ಸಹಭಾಗಿತ್ವವಿರುವ ಐದು ವರ್ಷಗಳ ಈ ಕಾರ್ಯಾಚರಣೆಯಲ್ಲಿ, ಮಂಗಳನ ಎರಡು ಉಪಗ್ರಹಗಳಲ್ಲಿ ಒಂದಾಗಿರುವ ಫೋಬೋಸ್ ಮೇಲೆ ರೋಬೋಟಿಕ್ ಪರಿಶೋಧಕ ಹಾಗೂ ರೋವರ್ ಅನ್ನು ಇಳಿಸುವ ಪ್ರಯತ್ನ ನಡೆಯಲಿದೆ. ಮಂಗಳನ ಅನ್ವೇಷಣೆಗೆ ಈ ಹಿಂದೆ ನಾಸಾ ಮತ್ತು ಚೀನಾ ನೌಕೆಗಳನ್ನು ಕಳುಹಿಸಿದ್ದರೂ, ಯಾರೂ ಕೂಡ ಫೋಬೋಸ್ ಅಥವಾ ಡೀಮೋಸ್ ಮೇಲೆ ಇಳಿಯುವ ಸಾಹಸ ಮಾಡಿರಲಿಲ್ಲ. ಈ ಯೋಜನೆ ಯಶಸ್ವಿಯಾದರೆ 2031ರ ವೇಳೆಗೆ ಫೋಬೋಸ್‌ನಿಂದ ಧೂಳು, ಮಣ್ಣು ಮತ್ತು ಕಲ್ಲನ್ನು ಭೂಮಿಗೆ ಹೊತ್ತು ತರಲಾಗುವುದು ಎಂದು ನಾಸಾದ ಖಭೌತವಿಜ್ಞಾನಿ ಟಾಮ್ ಸ್ಟ್ಯಾಟ್ಲರ್ ತಿಳಿಸಿದ್ದಾರೆ. ಜಪಾನ್ ಈಗಾಗಲೇ ಎರಡು ಕ್ಷುದ್ರಗ್ರಹಗಳಿಂದ ಮಾದರಿಗಳನ್ನು ಯಶಸ್ವಿಯಾಗಿ ಭೂಮಿಗೆ ತಂದಿರುವ ಹೆಗ್ಗಳಿಕೆಯನ್ನು ಹೊಂದಿದೆ.