ಜೆರುಸಲೆಮ್: ಭವಿಷ್ಯದಲ್ಲಿ ಅಮೆರಿಕದಲ್ಲಿ ಇಸ್ರೇಲ್ ವಿರೋಧಿ ಧೋರಣೆಯ ಅಧ್ಯಕ್ಷರು ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಎಚ್ಚರಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ತಮ್ಮ ದೇಶದ ಸ್ಥಾನಮಾನವನ್ನು ಬಲಪಡಿಸಲು ಭಾರತ ಹಾಗೂ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳೊಂದಿಗೆ ಹೊಸ ರಾಜತಾಂತ್ರಿಕ ಮೈತ್ರಿಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಇಸ್ರೇಲ್ನಲ್ಲಿ ಅಕ್ಟೋಬರ್ 27 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಒಂಬತ್ತು ದಿನಗಳಷ್ಟೇ ಬಾಕಿ ಇರುವಾಗ ನಡೆದ ಕಾರ್ಯಕ್ರಮವೊಂದರಲ್ಲಿ ನೆತನ್ಯಾಹು ತಮ್ಮ ಭದ್ರತಾ ಸಿದ್ಧಾಂತವನ್ನು ಮಂಡಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಅವರ ಮರುಚುನಾವಣೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ ಕೆಲವೇ ಗಂಟೆಗಳ ಬಳಿಕ ಈ ಪ್ರಮುಖ ಹೇಳಿಕೆ ಹೊರಬಿದ್ದಿದೆ.
"ಇನ್ನೂ ಎರಡು ವರ್ಷಗಳಲ್ಲಿ ಇಸ್ರೇಲ್ನೊಂದಿಗೆ ತೀವ್ರ ವೈರತ್ವ ಹೊಂದಿರುವ ವ್ಯಕ್ತಿಯೊಬ್ಬರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಕ್ಕೆ ಬರಬಹುದು" ಎಂದು ಆತಂಕ ವ್ಯಕ್ತಪಡಿಸಿದ ನೆತನ್ಯಾಹು, "ಅಂತಹ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಅಮೆರಿಕದೊಂದಿಗಿನ ಬಾಂಧವ್ಯವನ್ನು ಸಮತೋಲನದಲ್ಲಿಡಲು ಪರ್ಯಾಯ ಪರಿಹಾರಗಳ ಹುಡುಕಾಟ ಅಗತ್ಯ" ಎಂದು ಪ್ರತಿಪಾದಿಸಿದರು.
ಅಮೆರಿಕದ ನೀತಿಗಳಲ್ಲಿ ಮುಂದಿನ ದಿನಗಳಲ್ಲಿ ನಾಟಕೀಯ ಬದಲಾವಣೆಗಳು ಸಂಭವಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಟ್ರಂಪ್ ಅವರ ಉಳಿದ ಅಧ್ಯಕ್ಷೀಯ ಅವಧಿಯಲ್ಲೇ ಇಸ್ರೇಲ್ ತನ್ನ ಅಂತಾರಾಷ್ಟ್ರೀಯ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
"ನಾವು ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಹೊಸ ಮೈತ್ರಿಕೂಟಗಳನ್ನು ರೂಪಿಸಿಕೊಳ್ಳಬೇಕಿದೆ. ಭಾರತವು ಸಣ್ಣ ದೇಶವೇನಲ್ಲ, ಇಂತಹ ಇನ್ನೂ ಅನೇಕ ಮಹತ್ವದ ದೇಶಗಳ ಜೊತೆ ನಾನು ಕೆಲಸ ಮಾಡುತ್ತಿದ್ದೇನೆ," ಎಂದ ನೆತನ್ಯಾಹು, ಇಸ್ರೇಲ್ನ ಮಿತ್ರರಾಷ್ಟ್ರಗಳ ಜಾಲವನ್ನು ವಿಸ್ತರಿಸಲು ಲ್ಯಾಟಿನ್ ಅಮೆರಿಕ ಹಾಗೂ ಬ್ರೆಜಿಲ್ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಉತ್ತಮ ಅವಕಾಶ ಒದಗಿಸಿವೆ ಎಂದು ಉಲ್ಲೇಖಿಸಿದರು.
ಜಾಗತಿಕವಾಗಿ ಇಸ್ರೇಲ್ ಏಕಾಂಗಿಯಾಗಿಲ್ಲ ಎಂಬುದನ್ನು ಬಿಂಬಿಸಲು ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸುದೃಢ ಬಾಂಧವ್ಯ ಹಾಗೂ ಭಾರತದೊಂದಿಗಿನ ಇಸ್ರೇಲ್ನ ಅನನ್ಯ ಸಂಬಂಧವನ್ನು ಪದೇಪದೇ ಉಲ್ಲೇಖಿಸುತ್ತಾ ಬಂದಿದ್ದಾರೆ. ದೀರ್ಘಕಾಲದ ಯುದ್ಧದ ಸನ್ನಿವೇಶದ ನಡುವೆಯೂ ಭಾರತದಂತಹ ಜಾಗತಿಕ ಮಹಾಶಕ್ತಿಯಲ್ಲಿ ಇಸ್ರೇಲ್ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಇದೆ ಎಂದು ನೆತನ್ಯಾಹು ಪುನರುಚ್ಛರಿಸಿದ್ದಾರೆ.