ಯೆಮೆನ್: ಯೆಮೆನ್ನ ಹೌತಿ ಬಂಡುಕೋರರು ಚೀನಾದಿಂದ ಕಳುಹಿಸಲಾದ ಬಿಡಿಭಾಗಗಳನ್ನು ಬಳಸಿ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಪ್ರಮುಖ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಶಸ್ತ್ರಾಸ್ತ್ರ ಸರಪಳಿಗಳನ್ನು ಪರಿಶೀಲಿಸುವ 'ಕನ್ಫ್ಲಿಕ್ಟ್ ಆರ್ರ್ಮೆಂಟ್ ರಿಸರ್ಚ್' (ಸಿಎಆರ್) ಸಂಸ್ಥೆಯ ತನಿಖೆಯಿಂದ ಈ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ. ಹೌತಿಗಳು ತಯಾರಿಸುತ್ತಿರುವ ಈ ಶಸ್ತ್ರಾಸ್ತ್ರಗಳು ಇರಾನ್ನ 'ಖೈಬರ್ ಶೆಕನ್' ಮಾದರಿಯನ್ನು ಹೋಲುತ್ತವೆ. ವಾಯು ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸಿ ಚಲಿಸಬಲ್ಲ ಈ ಕ್ಷಿಪಣಿ ಸುಮಾರು 1,200 ಮೈಲುಗಳಷ್ಟು ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಇದರಿಂದ ಸೌದಿ ಅರೇಬಿಯಾ ಮತ್ತು ಇಸ್ರೇಲ್ ದೇಶಗಳು ಸುಲಭವಾಗಿ ದಾಳಿಯ ವ್ಯಾಪ್ತಿಗೆ ಸಿಲುಕುವ ಆತಂಕ ಎದುರಾಗಿದೆ. ಕಳೆದ ವರ್ಷ ಯೆಮೆನ್ ಅಧಿಕಾರಿಗಳು ತಡೆಹಿಡಿದಿದ್ದ ಸಾಗಣೆಗಳ ಪರಿಶೀಲನೆಯಲ್ಲಿ ಕ್ಷಿಪಣಿ ಮೋಟಾರ್, ಏರ್ಫ್ರೇಮ್ ಹಾಗೂ ಕಸ್ಟಮ್-ನಿರ್ಮಿತ ಲೋಹದ ಘಟಕಗಳು ಪತ್ತೆಯಾಗಿವೆ. ಈ ಸಾಮಗ್ರಿಗಳನ್ನು ಸಾಮಾನ್ಯ ಸರಕುಗಳ ನಡುವೆ ಅತ್ಯಂತ ಚಾತುರ್ಯದಿಂದ ಮರೆಮಾಚಲಾಗಿತ್ತು. ಸಾಗಣೆ ದಾಖಲೆಗಳಲ್ಲಿ ಚೀನಾದ ನಿಖರ-ಲೋಹ ತಯಾರಿಕಾ ಕಂಪನಿಯೊಂದರ ಉಲ್ಲೇಖವಿದ್ದು, ಕೆಲವು ಬಿಡಿಭಾಗಗಳು ನಾಗರಿಕ ಹಾಗೂ ಮಿಲಿಟರಿ ಎರಡೂ ಉದ್ದೇಶಗಳಿಗೆ ಬಳಕೆಯಾಗುವಂತಿವೆ. ಯೆಮೆನ್ ಬಂಡುಕೋರರಿಗೆ ಶಸ್ತ್ರಾಸ್ತ್ರ ಮಾರಾಟದ ವಿಶ್ವಸಂಸ್ಥೆಯ ನಿಷೇಧವನ್ನು ಗೌರವಿಸುವುದಾಗಿ ಬೀಜಿಂಗ್ ಹೇಳಿಕೊಂಡಿದ್ದರೂ, ಈ ಹೊಸ ಬೆಳವಣಿಗೆಯು ಮಧ್ಯಪ್ರಾಚ್ಯದಲ್ಲಿ ಭದ್ರತಾ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.