ಯುಎಇ/ತುಂಬೆ : ಯುಎಇ ಹಾಗೂ ಈ ಪ್ರಾದೇಶಿಕ ವೈದ್ಯಕೀಯ ಪದವೀಧರರಿಗೆ ಯುರೋಪಿಯನ್ ಒಕ್ಕೂಟದಲ್ಲಿ (EU) ವಿಶೇಷ ತರಬೇತಿ ಪಡೆಯಲು ನೇರ ಅವಕಾಶ ಕಲ್ಪಿಸುವ ಸಲುವಾಗಿ ತುಂಬೆ ಗ್ರೂಪ್ ಮತ್ತು ರೊಮೇನಿಯಾದ ಪ್ರಮುಖ ಸಾರ್ವಜನಿಕ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜಾರ್ಜ್ ಎಮಿಲ್ ಪಾಲೇಡ್ ಯೂನಿವರ್ಸಿಟಿ ಆಫ್ ಮೆಡಿಸಿನ್, ಫಾರ್ಮಸಿ, ಸೈನ್ಸ್ ಅಂಡ್ ಟೆಕ್ನಾಲಜಿ ಆಫ್ ತಾರ್ಗು ಮುರೆಸ್ (UMFST) ಜಂಟಿಯಾಗಿ 'ತುಂಬೆ-ಯುಎಂಎಫ್‌ಎಸ್‌ಟಿ ಇಂಟರ್‌ನ್ಯಾಷನಲ್ ರೆಸಿಡೆನ್ಸಿ ಪಾತ್‌ವೇ ಪ್ರೋಗ್ರಾಂ' ಅನ್ನು ಪ್ರಾರಂಭಿಸಿವೆ. ಈ ನೂತನ ಕಾರ್ಯಕ್ರಮವು ಕಾರ್ಡಿಯಾಲಜಿ, ನ್ಯುರಾಸರ್ಜರಿ, ತುರ್ತು ವೈದ್ಯಕೀಯ ಸೇವೆಗಳು ಮತ್ತು ರೇಡಿಯಾಲಜಿ ಸೇರಿದಂತೆ ಒಟ್ಟು 49 ವೈದ್ಯಕೀಯ ವಿಶೇಷತೆಗಳನ್ನು (28 ವೈದ್ಯಕೀಯ, 13 ಶಸ್ತ್ರಚಿಕಿತ್ಸಾ ಮತ್ತು 8 ಪ್ಯಾರಾಕ್ಲಿನಿಕಲ್) ಒಳಗೊಂಡಿದೆ.
ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಯುಎಂಎಫ್‌ಎಸ್‌ಟಿ ವಿಶ್ವವಿದ್ಯಾಲಯದ ಅತ್ಯುನ್ನತ ಪ್ರಶಸ್ತಿಯಾದ 'ಮೆಡಲ್ ಆಫ್ ಹಾನರ್' ಅನ್ನು ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಹಿದೀನ್ ಅವರಿಗೆ ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ ಪ್ರದಾನ ಮಾಡಲಾಗಿದೆ. ರೊಮೇನಿಯಾದ ತಾರ್ಗು ಮುರೆಸ್‌ನಲ್ಲಿರುವ ಮಾನ್ಯತೆ ಪಡೆದ ಕ್ಲಿನಿಕಲ್ ಘಟಕಗಳಲ್ಲಿ ಈ ತರಬೇತಿಯು ಮುಂದುವರಿಯಲಿದ್ದು, ವಿಶೇಷತೆಗೆ ತಕ್ಕಂತೆ 4 ರಿಂದ 6 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಈ ತರಬೇತಿಯು ರೊಮೇನಿಯನ್ ಆರೋಗ್ಯ ಸಚಿವಾಲಯದ ಅಧಿಕೃತ ಪಠ್ಯಕ್ರಮವನ್ನು ಅನುಸರಿಸಲಿದ್ದು, ರಾಷ್ಟ್ರೀಯ ಪರೀಕ್ಷೆಯ ಮೂಲಕ ಸಚಿವಾಲಯದ ಆದೇಶದ ಮೇರೆಗೆ ತಜ್ಞರ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಅಲ್ಲದೆ, ರೆಸಿಡೆನ್ಸಿ ತರಬೇತಿಯೊಂದಿಗೆ ಡಾಕ್ಟರಲ್ (ಪಿಎಚ್‌ಡಿ) ವ್ಯಾಸಂಗವನ್ನೂ ಮಾಡುವ ಅವಕಾಶವನ್ನು ರೊಮೇನಿಯನ್ ಕಾನೂನು ಕಲ್ಪಿಸುತ್ತದೆ.
ಎಂ.ಡಿ (MD) ಪದವಿಯ ನಂತರ ಯಾವುದೇ ಕಡ್ಡಾಯ ರೊಟೇಟಿಂಗ್ ಇಂಟರ್ನ್‌ಶಿಪ್ ಇಲ್ಲದೆ ಪದವೀಧರರು ನೇರವಾಗಿ ರೆಸಿಡೆನ್ಸಿಗೆ ಪ್ರವೇಶ ಪಡೆಯಬಹುದಾಗಿದೆ. ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಮತ್ತು ತುಂಬೆ ಇಂಟರ್‌ನ್ಯಾಷನಲ್ ಮೆಡಿಸಿನ್ ಪಾತ್‌ವೇ ಕಾರ್ಯಕ್ರಮದ ಪದವೀಧರರಿಗೆ ಪ್ರವೇಶಾತಿಗೆ ಆದ್ಯತೆಯ ಪರಿಗಣನೆ ಸಿಗಲಿದೆ. ಪ್ರಥಮ ಹಂತದ ಪ್ರವೇಶಾತಿಗೆ ಅಕ್ಟೋಬರ್ 20, 2026ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದು, ಆಸಕ್ತರು thumbaypathway.com/apply ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.