image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಭಯೋತ್ಪಾದನೆ ಕಳವಳ ಗ್ರಹಿಸದಿದ್ದರೆ ಅಮೆರಿಕ ಬಾಂಧವ್ಯಕ್ಕೆ ಧಕ್ಕೆ: ಜೈಶಂಕರ್

ಭಯೋತ್ಪಾದನೆ ಕಳವಳ ಗ್ರಹಿಸದಿದ್ದರೆ ಅಮೆರಿಕ ಬಾಂಧವ್ಯಕ್ಕೆ ಧಕ್ಕೆ: ಜೈಶಂಕರ್

ನ್ಯೂಯಾರ್ಕ್: ನೆರೆಯ ದೇಶದಿಂದ ಉದ್ಭವಿಸುವ ಭಯೋತ್ಪಾದನೆಯು ಭಾರತದ ಅತ್ಯಂತ ಪ್ರಮುಖ ಕಳವಳಗಳಲ್ಲಿ ಒಂದಾಗಿದ್ದು, ನವದೆಹಲಿಯ ಪಾಲುದಾರ ರಾಷ್ಟ್ರಗಳು ಇದನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳದಿದ್ದರೆ ಅದು ದ್ವಿಪಕ್ಷೀಯ ಬಾಂಧವ್ಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಎಚ್ಚರಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಉನ್ನತ ಮಟ್ಟದ ಅಧಿವೇಶನದ ಅಂಗವಾಗಿ 'ಏಷ್ಯಾ ಸೊಸೈಟಿ' ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಪ್ರಮುಖರು ಹಾಗೂ ನೀತಿ ನಿರೂಪಕರನ್ನು ಉದ್ದೇಶಿಸಿ ಜೈಶಂಕರ್ ಈ ಪ್ರಮುಖ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾಜಿ ಅಮೆರಿಕನ್ ರಾಜತಾಂತ್ರಿಕ ಡೇನಿಯಲ್ ರಸ್ಸೆಲ್ ನಡೆಸಿಕೊಟ್ಟ ಈ ಸಂವಾದದಲ್ಲಿ, ವ್ಯಾಪಾರ ಹಾಗೂ ಸುಂಕದ ಸವಾಲುಗಳ ಕುರಿತು ಉತ್ತರಿಸಿದ ಸಚಿವರು, ಜಗತ್ತಿನ ಬಹುತೇಕ ದೇಶಗಳು ಅಮೆರಿಕದೊಂದಿಗೆ ತುಸು ಕಠಿಣವಾದ ಸಂಬಂಧವನ್ನೇ ಹೊಂದಿವೆ ಎಂಬುದು ವಾಸ್ತವ ಎಂದರು. ಇದೇ ವೇಳೆ ಪಾಕಿಸ್ತಾನವನ್ನು ಉಲ್ಲೇಖಿಸಿ, ದಶಕಗಳಿಂದ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ಹೇರಲಾದ ಗಡಿಯಾಚೆಗಿನ ಭಯೋತ್ಪಾದನೆಯು ನಮ್ಮ ಪ್ರಮುಖ ಸೂಕ್ಷ್ಮ ವಿಷಯವಾಗಿದೆ. ನಮ್ಮ ಮುಖ್ಯ ಕಾಳಜಿಯನ್ನು ಮಿತ್ರರಾಷ್ಟ್ರ ಗೌರವಿಸದಿದ್ದರೆ ಬಾಂಧವ್ಯದ ಮೇಲೆ ಪರಿಣಾಮ ಬೀರುವುದು ಸಹಜ ಎಂದು ಹೇಳಿದರು.

ಮತ್ತೊಂದೆಡೆ ನವದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಗಡಿಯಾಚೆಗಿನ ಭಯೋತ್ಪಾದನೆಯು ತೀವ್ರ ಕಳವಳಕಾರಿ ವಿಷಯವಾಗಿದ್ದು, ಈ ಜಾಗತಿಕ ಪಿಡುಗಿನ ವಿರುದ್ಧ ವಿಶ್ವದ ರಾಷ್ಟ್ರಗಳು ಒಗ್ಗೂಡಿ ಹೋರಾಡಬೇಕು ಎಂಬ ವಿದೇಶಾಂಗ ಸಚಿವರ ನಿಲುವನ್ನು ಪುನರುಚ್ಚರಿಸಿದರು.

Category
ಕರಾವಳಿ ತರಂಗಿಣಿ