ಇರಾನ್ : ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರಗೊಂಡಿರುವ ಯುದ್ಧದ ಮಧ್ಯೆಯೇ ರಾಜತಾಂತ್ರಿಕ ಮಟ್ಟದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವಾಷಿಂಗ್ಟನ್ ತನ್ನ ಕಠಿಣ ಆರ್ಥಿಕ ದಿಗ್ಬಂಧನ ಹಾಗೂ ನೌಕಾ ನಿರ್ಬಂಧಗಳನ್ನು ಸಡಿಲಿಸಿದರೆ, ಕೇವಲ ಏಳು ದಿನಗಳಲ್ಲಿ ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಉಚಿತ ಹಾಗೂ ಮುಕ್ತ ಸಂಚಾರಕ್ಕೆ ತೆರೆಯುವುದಾಗಿ ಇರಾನ್ ಆಫರ್ ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ಅಮೆರಿಕದ ನವೆಂಬರ್ ಚುನಾವಣೆಗಳಿಗೆ ಮುನ್ನ ಜೂನ್ ತಿಂಗಳ ಕದನ ವಿರಾಮ ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಒಲವು ವ್ಯಕ್ತಪಡಿಸಿದ್ದು, ಯುದ್ಧವನ್ನು ಕೊನೆಗೊಳಿಸಬೇಕೇ ಅಥವಾ ಮುಂದುವರೆಸಬೇಕೇ ಎಂಬ ತೀರ್ಮಾನ ಈಗ ಅಮೆರಿಕದ ಕೈಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ 7 ದಿನಗಳ ಮಾರ್ಗಸೂಚಿ ಪ್ರಸ್ತಾವನೆಯನ್ನು ಈಗಾಗಲೇ ರವಾನಿಸಲಾಗಿದೆ.
ಒಂದೆಡೆ ಅಧ್ಯಕ್ಷರು ಸಂಧಾನದ ಮಾತುಗಳನ್ನಾಡುತ್ತಿದ್ದರೆ, ಮತ್ತೊಂದೆಡೆ ಇರಾನ್‌ನ ಸುಪ್ರೀಂ ಲೀಡರ್ ಮಿಲಿಟರಿ ಸಲಹೆಗಾರರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಏನಾದರೂ ಹೊಸದಾಗಿ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ, ಈ ಯುದ್ಧ ಕೇವಲ ಗಲ್ಫ್ ವಲಯಕ್ಕೆ ಮಾತ್ರ ಸೀಮಿತವಾಗಿರದೆ ಕೆಂಪು ಸಮುದ್ರ, ಬಾಬ್ ಅಲ್-ಮಂಡೇಬ್ ಜಲಸಂಧಿ ಮತ್ತು ಇಡೀ ಹಿಂದೂ ಮಹಾಸಾಗರಕ್ಕೂ ಹರಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ನ ಮಿಲಿಟರಿ ಶಕ್ತಿಯನ್ನು ಪುಡಿಪುಡಿ ಮಾಡಿರುವುದಾಗಿ ವಿಶ್ವಸಂಸ್ಥೆಯಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕತಾರ್, ನೆತನ್ಯಾಹು ತಮ್ಮ ದೇಶೀಯ ರಾಜಕೀಯ ಸಂಕಷ್ಟಗಳಿಂದ ಜಗತ್ತಿನ ಗಮನ ಬೇರೆಡೆ ಸೆಳೆಯಲು ಈ ದಾಳಿಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದೆ. ಮತ್ತೊಂದೆಡೆ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಯುಎಇ (UAE) ಇರಾನ್‌ನ ವಿಮಾನಯಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಇನ್ನೊಂದೆಡೆ, ಶಾಂತಿ ಸ್ಥಾಪನೆಗೆ ರಷ್ಯಾ ಹಾಗೂ ಪಾಕಿಸ್ತಾನ ರಾಜತಾಂತ್ರಿಕ ಯತ್ನಗಳನ್ನು ನಡೆಸುತ್ತಿವೆ. ನ್ಯೂಯಾರ್ಕ್‌ನಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಅವರನ್ನು ಭೇಟಿಯಾದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಅಮೆರಿಕ-ಇಸ್ರೇಲ್ ಕದನದಿಂದ ಸೃಷ್ಟಿಯಾಗಿರುವ ಈ ಬಿಕ್ಕಟ್ಟನ್ನು ಕೇವಲ ರಾಜತಾಂತ್ರಿಕ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಕೂಡ ತೆರೆಮರೆಯ ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಶಾಂತಿ ಸ್ಥಾಪನೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.