ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ದುರಸ್ತಿಗಾಗಿ ರವಾನೆಯಾಗುತ್ತಿದ್ದ ಅಮೆರಿಕದ ಅತ್ಯಾಧುನಿಕ F-35 ಲೈಟ್ನಿಂಗ್ II ಯುದ್ಧವಿಮಾನದ ಪ್ರಮುಖ ಬಿಡಿಭಾಗಗಳು ಮಾರ್ಗಮಧ್ಯೆ ದಾರಿ ತಪ್ಪಿ ಚೀನಾದ ಸಂಪೂರ್ಣ ಆಡಳಿತಕ್ಕೊಳಪಟ್ಟ ಹಾಂಗ್ ಕಾಂಗ್ ತಲುಪಿದ್ದು, ಪ್ರಸ್ತುತ ಚೀನಾ ಸರ್ಕಾರವು ಅವುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅತ್ಯುನ್ನತ ವರ್ಗೀಕೃತ ತಂತ್ರಜ್ಞಾನವನ್ನು ಒಳಗೊಂಡಿರುವ ಈ ರಹಸ್ಯ ಭಾಗಗಳು ಅನಿರೀಕ್ಷಿತವಾಗಿ ಹಾಂಗ್ ಕಾಂಗ್‌ಗೆ ಹೇಗೆ ತಲುಪಿದವು ಎಂಬ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯ ಕಚೇರಿ ಪೆಂಟಗನ್ ಹಾಗೂ ಅಮೆರಿಕ ಸಂಸತ್ತು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ತನಿಖೆ ಆರಂಭಿಸಿವೆ.
ವರದಿಗಳ ಪ್ರಕಾರ, ಆಸ್ಟ್ರೇಲಿಯಾ ವಾಯುಪಡೆಯಲ್ಲಿದ್ದ F-35A ವಿಮಾನದ ಕಾಕ್‌ಪಿಟ್ ಕ್ಯಾನೋಪಿ ಹಾಗೂ ಶತ್ರುಗಳ ರಾಡಾರ್‌ಗೆ ಸಿಗದಂತೆ ಆಯುಧಗಳನ್ನು ಅಡಗಿಸಿಡುವ 'ಶಸ್ತ್ರಾಸ್ತ್ರಗಳ ಬೇ ಬಾಗಿಲು' (weapons-bay door) ಹೊಂದಿದ್ದ ಸರಕನ್ನು ಮೇ ತಿಂಗಳ ಕೊನೆಯಲ್ಲಿ ಖಾಸಗಿ ಸರಕು ಸಾಗಣೆ ಸಂಸ್ಥೆಯ ಮೂಲಕ ಅಮೆರಿಕಕ್ಕೆ ಕಳುಹಿಸಲಾಗುತ್ತಿತ್ತು. ದಕ್ಷಿಣ ಕೊರಿಯಾದ ಮಾರ್ಗವಾಗಿ ತಲುಪಬೇಕಿದ್ದ ಈ ಸರಕು ಹಡಗಿನ ಮೂಲಕ ಅನಿರೀಕ್ಷಿತವಾಗಿ ಹಾಂಗ್ ಕಾಂಗ್ ತಲುಪಿದೆ. ಐದನೇ ತಲೆಮಾರಿನ ಈ ವಿಮಾನಗಳಲ್ಲಿ ಶತ್ರು ರಾಡಾರ್‌ಗಳಿಂದ ತಪ್ಪಿಸಿಕೊಳ್ಳಲು ಬಳಸಲಾಗುವ ವಿಶೇಷ ರಹಸ್ಯ ಲೇಪನದ (radar-absorbing material) ತಂತ್ರಜ್ಞಾನವನ್ನು ಚೀನಾ ಪಡೆದುಕೊಂಡಿರಬಹುದು ಎಂಬ ಕಳವಳ ವ್ಯಕ್ತವಾಗಿದೆ.
ಈ ಬೆಳವಣಿಗೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್, ವಿಮಾನದ ಬಿಡಿಭಾಗಗಳು ಹಾಂಗ್ ಕಾಂಗ್ ತಲುಪಿರುವುದನ್ನು ದೃಢಪಡಿಸಿದ್ದು, ಆಸ್ಟ್ರೇಲಿಯಾ ಸರ್ಕಾರವು ಅಮೆರಿಕ ಹಾಗೂ ಜೆಟ್‌ನ ತಯಾರಿಕಾ ಸಂಸ್ಥೆಯಾದ ಲಾಕ್‌ಹೀಡ್ ಮಾರ್ಟಿನ್ ಜೊತೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ತಮ್ಮ ತಿಳುವಳಿಕೆಯ ಪ್ರಕಾರ ಇವು ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಒಳಗೊಂಡ ಭಾಗಗಳಲ್ಲ ಎಂದು ಅವರು ಸಾರ್ವಜನಿಕ ಕಳವಳ ಶಮನಗೊಳಿಸಲು ಯತ್ನಿಸಿದ್ದರೂ, ಅಮೆರಿಕದ ಅಧಿಕಾರಿಗಳು ಈ ಲೋಪವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. F-35 ಜಂಟಿ ಕಾರ್ಯಕ್ರಮ ಕಚೇರಿಯು (JPO) ಯುಎಸ್ ಅಧಿಕಾರಿಗಳೊಂದಿಗೆ ಸೇರಿ ಈ ಬಿಡಿಭಾಗಗಳನ್ನು ಹಿಂಪಡೆಯಲು ಹಾಗೂ ಭವಿಷ್ಯದಲ್ಲಿ ಇಂತಹ ಭದ್ರತಾ ಲೋಪಗಳು ಮರುಕಳಿಸದಂತೆ ಸುರಕ್ಷತಾ ಕ್ರಮ ಕೈಗೊಳ್ಳಲು ಶ್ರಮಿಸುತ್ತಿರುವುದಾಗಿ ತಿಳಿಸಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ವಾಷಿಂಗ್ಟನ್‌ಗೆ ಆಗಮಿಸಿದ ಸಂದರ್ಭದಲ್ಲೇ ಈ ಘಟನೆ ಬೆಳಕಿಗೆ ಬಂದಿರುವುದು ರಾಜತಾಂತ್ರಿಕ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ವಿಷಯದ ಕುರಿತು ಚೀನಾದ ವಿದೇಶಾಂಗ ಸಚಿವಾಲಯವು ತಮಗೆ ಮಾಹಿತಿಯಿಲ್ಲ ಎಂದಿದ್ದರೆ, ಹಾಂಗ್ ಕಾಂಗ್ ಸರ್ಕಾರವು ನಿರ್ದಿಷ್ಟ ಸಾಗಣೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದೆ. ಜಗತ್ತಿನ 19 ದೇಶಗಳು ಬಳಸುತ್ತಿರುವ ಹಾಗೂ ಅಮೆರಿಕದ ವಾಯುಪಡೆಯ ಬೆನ್ನೆಲುಬಾಗಿರುವ F-35 ವಿಮಾನದ ತಂತ್ರಜ್ಞಾನ ಸೋರಿಕೆಯಾಗಿರುವುದನ್ನು ತಡೆಯುವುದು ಮತ್ತು ದಾರಿ ತಪ್ಪಿದ ಬಿಡಿಭಾಗಗಳನ್ನು ಮೂಲಕ್ಕೆ ತರುವುದು ಪೆಂಟಗನ್‌ನ ತನಿಖೆಯ ಮುಖ್ಯ ಉದ್ದೇಶವಾಗಿದೆ.