ಅಜ್ಮಾನ್/ತುಂಬೆ : ಯುಎಇಯ ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು) ತನ್ನ ತಂಬೆ ಗ್ರೌಂಡ್ಸ್‌ನಲ್ಲಿ 2026ನೇ ಸಾಲಿನ 'ವೈಟ್ ಕೋಟ್ ಸಮಾರಂಭ'ವನ್ನು ಆಯೋಜಿಸುವ ಮೂಲಕ ನೂತನ ವಿದ್ಯಾರ್ಥಿಗಳ ಸಾಲನ್ನು ಬರಮಾಡಿಕೊಂಡಿತು. ಈ ವರ್ಷದ ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ವಿಶ್ವವಿದ್ಯಾಲಯವು ತನ್ನ ಸ್ಥಾಪನೆಯಿಂದ ಇದುವರೆಗೆ ಒಟ್ಟು 115 ರಾಷ್ಟ್ರಗಳ ವಿದ್ಯಾರ್ಥಿಗಳನ್ನು ತಲುಪಿದ ಅಪರೂಪದ ಮೈಲಿಗಲ್ಲನ್ನು ಸಾಧಿಸಿದೆ.
ಸಮಾರಂಭದ ಮುಖ್ಯ ಅತಿಥಿಯಾಗಿ ತಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತಂಬೆ ಮೊಯ್ದೀನ್ ಭಾಗವಹಿಸಿದ್ದರೆ, ಜಿಎಂಯು ಚಾನ್ಸಲರ್ ಪ್ರೊ. ಮಂದಾ ವೆಂಕಟರಮಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೂತನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ತಂಬೆ ಮೊಯ್ದೀನ್, "ಗಲ್ಫ್ ಭಾಗದ ಪ್ರಮುಖ ವಿಶ್ವವಿದ್ಯಾಲಯವಾಗಿ ಪ್ರಯಾಣ ಆರಂಭಿಸಿದ ನಾವು, ಇಂದು ಜಗತ್ತಿನ ಅತ್ಯುತ್ತಮ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಹೊರಹೊಮ್ಮಿದ್ದೇವೆ" ಎಂದು ತಿಳಿಸಿದರು.
ಚಾನ್ಸಲರ್ ಪ್ರೊ. ಮಂದಾ ವೆಂಕಟರಮಣ ಮಾತನಾಡಿ, "ವೈಟ್ ಕೋಟ್ ಧರಿಸುವುದಷ್ಟೇ ಒಬ್ಬರನ್ನು ವೈದ್ಯರನ್ನಾಗಿ ಮಾಡುವುದಿಲ್ಲ, ವರ್ಷಗಳ ಕಾಲ ಉತ್ತಮ ಪ್ರಶ್ನೆಗಳನ್ನು ಕೇಳುವುದು ಮತ್ತು ನಿರಂತರವಾಗಿ ಕಲಿಯುವುದು ಮುಖ್ಯ. ವಿಜ್ಞಾನದ ಬೆಳವಣಿಗೆಯ ಜೊತೆಗೆ ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಸದಾ ಜೀವಂತವಾಗಿರಿಸಿಕೊಳ್ಳಬೇಕು" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಮಾರಂಭದಲ್ಲಿ ವೈದ್ಯಕೀಯ (MD), ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಮೆಡಿಕಲ್ ಲ್ಯಾಬೊರೇಟರಿ, ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಹಾಗೂ ಹೆಲ್ತ್‌ಕೇರ್‌ನಲ್ಲಿ ಎಐ (AI) ಸೇರಿದಂತೆ ವಿವಿಧ ವಿಭಾಗಗಳ ನೂತನ ವಿದ್ಯಾರ್ಥಿಗಳು ವೃತ್ತಿಪರ ಪ್ರಮಾಣವಚನ ಸ್ವೀಕರಿಸಿದರು. ಅಜ್ಮಾನ್‌ಗೆ ಆಗಮಿಸಲು ಸಾಧ್ಯವಾಗದ ಕುಟುಂಬಸ್ಥರಿಗಾಗಿ ಇಡೀ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷವಾಗಿ, ಈ ಬಾರಿಯ ಸಮಾರಂಭದಲ್ಲಿ ಯುಎಇಯಲ್ಲೇ ಪ್ರಥಮ ಬಾರಿಗೆ ಪಶುವೈದ್ಯಕೀಯ (ಡಾಕ್ಟರ್ ಆಫ್ ವೆಟರಿನರಿ ಮೆಡಿಸಿನ್) ವಿಭಾಗದ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ಪ್ರದಾನ ಮಾಡಲಾಯಿತು. ವಾತಾವರಣ ಬದಲಾವಣೆ ಮತ್ತು ಪರಿಸರ ಸಚಿವಾಲಯದ ಪ್ರಾಣಿ ಆರೋಗ್ಯ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ. ಕಲ್ತಮ್ ಅಲಿ ಕಯಾಫ್ ಮುಖ್ಯ ಅತಿಥಿಯಾಗಿ ಆಗಮಿಸಿ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಿಸಿದರು.
ತಂಬೆ ಮೆಡಿಸಿಟಿಯಲ್ಲಿ ಶೀಘ್ರದಲ್ಲೇ 'ತಂಬೆ ಪಶು ವೈದ್ಯಕೀಯ ಆಸ್ಪತ್ರೆ' ಆರಂಭವಾಗಲಿದ್ದು, ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಒಂದೇ ಸಮಗ್ರ ವ್ಯವಸ್ಥೆಯಡಿ ಬೋಧಿಸುವ ಮಾದರಿಯನ್ನು ಜಿಎಂಯು ಅಳವಡಿಸಿಕೊಂಡಿದೆ. 1998ರಲ್ಲಿ ಸ್ಥಾಪನೆಯಾದ ಜಿಎಂಯು, 3,100 ಹಾಸಿಗೆಗಳ ಸಾಮರ್ಥ್ಯವುಳ್ಳ ಬೃಹತ್ ತಂಬೆ ಹೆಲ್ತ್‌ಕೇರ್ ನೆಟ್‌ವರ್ಕ್ ಬೆಂಬಲದೊಂದಿಗೆ ಮೊದಲ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ತರಬೇತಿಯನ್ನು ಒದಗಿಸುತ್ತಿದೆ.