image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಸ್ವಯಂ ಅಪಹಾಸ್ಯ: ಉಗ್ರರ ಅಸ್ತಿತ್ವ ಒಪ್ಪಿಕೊಂಡ ಶೆಹಬಾಜ್ ಶರೀಫ್

ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಸ್ವಯಂ ಅಪಹಾಸ್ಯ: ಉಗ್ರರ ಅಸ್ತಿತ್ವ ಒಪ್ಪಿಕೊಂಡ ಶೆಹಬಾಜ್ ಶರೀಫ್

ಅಮೇರಿಕ : ವಿಶ್ವಸಂಸ್ಥೆಯ ಮಹಾಸಭೆಯ (UNGA) ವೇದಿಕೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ನೀಡಿದ ಹೇಳಿಕೆಯೊಂದು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆ ಹಾಗೂ ನೆಟ್ಟಿಗರ ವ್ಯಂಗ್ಯಕ್ಕೆ ಈಡಾಗಿದೆ. ತಮ್ಮ ದೇಶದಲ್ಲಿ ಯಾವುದೇ ಭಯೋತ್ಪಾದಕರಿಗೂ ಆಶ್ರಯ ನೀಡಿಲ್ಲ ಎಂದು ಸಾಂಪ್ರದಾಯಿಕವಾಗಿ ವಾದಿಸುತ್ತಾ ಬಂದಿದ್ದ ಪಾಕಿಸ್ತಾನ, ಇದೀಗ ತನ್ನ ನೆಲದಲ್ಲಿ ಅಪಾರ ಪ್ರಮಾಣದ ಉಗ್ರರಿದ್ದಾರೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.

ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಷರೀಫ್, ತಮ್ಮ ದೇಶವು ಉಗ್ರವಾದದ ವಿರುದ್ಧ ಹೋರಾಡುತ್ತಿದೆ ಎಂದು ಪ್ರತಿಪಾದಿಸುವ ಭರದಲ್ಲಿ ಎಡವಿದ್ದಾರೆ. "ಒಂದು ವೇಳೆ ಪಾಕಿಸ್ತಾನವು ತನ್ನ ನೆಲದಲ್ಲಿರುವ ಉಗ್ರರನ್ನು ನಿಯಂತ್ರಿಸದೇ ಹೋಗಿದ್ದರೆ, ಆ ಉಗ್ರರು ಇಂದು ನ್ಯೂಯಾರ್ಕ್ ಅಥವಾ ಲಂಡನ್‌ನ ಬೀದಿಗಳಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದರು. ಅವರನ್ನು ತಡೆದಿರುವುದೇ ಜಗತ್ತಿಗೆ ಹಾಗೂ ನಮಗೆ ಪಾಕಿಸ್ತಾನ ನೀಡಿರುವ ವಿನಮ್ರ ಕೊಡುಗೆ" ಎಂದು ಹೇಳಿಕೊಂಡಿದ್ದರು.

ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಭದ್ರತಾ ತಜ್ಞರು ಪಾಕ್ ಪ್ರಧಾನಿಯ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಲಂಡನ್ ಹಾಗೂ ನ್ಯೂಯಾರ್ಕ್ ನಗರಗಳಿಗೇ ಕಂಟಕವಾಗುವಷ್ಟು ಅಪಾರ ಪ್ರಮಾಣದ ಉಗ್ರರನ್ನು ಪಾಕಿಸ್ತಾನ ಸಾಕುತ್ತಿದೆ ಎಂಬುದನ್ನು ಸ್ವತಃ ಪ್ರಧಾನಿಯೇ ಜಾಗತಿಕ ವೇದಿಕೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಲಾಗುತ್ತಿದೆ. ಇದೇ ವೇಳೆ, ಉಗ್ರರು ತಮ್ಮ ಕಂಟ್ರೋಲ್‌ನಲ್ಲಿದ್ದಾರೆ ಎಂದು ಹೇಳುವ ಮೂಲಕ ಪಾಕಿಸ್ತಾನವು ಅಮೆರಿಕ ಹಾಗೂ ಯುಕೆ ದೇಶಗಳಿಗೆ ಪರೋಕ್ಷ ಬೆದರಿಕೆ ಹಾಕಲು ಯತ್ನಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Category
ಕರಾವಳಿ ತರಂಗಿಣಿ