image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಗ್ರೀನ್‌ಲ್ಯಾಂಡ್‌ ಜೊತೆ ಅಮೆರಿಕ ಭದ್ರತಾ ಒಪ್ಪಂದ: ಡೊನಾಲ್ಡ್ ಟ್ರಂಪ್‌ ಐತಿಹಾಸಿಕ ಸಾಹಸ

ಗ್ರೀನ್‌ಲ್ಯಾಂಡ್‌ ಜೊತೆ ಅಮೆರಿಕ ಭದ್ರತಾ ಒಪ್ಪಂದ: ಡೊನಾಲ್ಡ್ ಟ್ರಂಪ್‌ ಐತಿಹಾಸಿಕ ಸಾಹಸ

ನ್ಯೂಯಾರ್ಕ್‌ : ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ ನಾಯಕರೊಂದಿಗೆ ಬೃಹತ್ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಡೆನ್ಮಾರ್ಕ್‌ ವ್ಯಾಪ್ತಿಯಲ್ಲಿ ಬರುವ ಅರೆಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್‌ ಅನ್ನು ನೇರವಾಗಿ ವಶಪಡಿಸಿಕೊಳ್ಳುವ ಯತ್ನದಲ್ಲಿ ವಿಫಲರಾಗಿದ್ದ ಟ್ರಂಪ್‌, ಕೊನೆಗೂ ಅದರೊಂದಿಗೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಒಪ್ಪಂದದ ಮೂಲಕ ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಹೆಚ್ಚುತ್ತಿರುವ ಪ್ರಭಾವಕ್ಕೆ ತಡೆಹಾಕಲು ಅಮೆರಿಕ ಬಹುದೊಡ್ಡ ಹೆಜ್ಜೆ ಇಟ್ಟಿದೆ.

ಹಿಮಾವೃತ ಬೃಹತ್ ದ್ವೀಪವಾದ ಗ್ರೀನ್‌ಲ್ಯಾಂಡ್‌ ಮೇಲಿನ ಸಾರ್ವಭೌಮ ಅಧಿಕಾರವನ್ನು ಡೆನ್ಮಾರ್ಕ್ ಬಳಿಯೇ ಕಾಯ್ದುಕೊಂಡು, ಅಲ್ಲಿ ಅಮೆರಿಕ ತನ್ನ ಸೇನಾ ಅಸ್ತಿತ್ವವನ್ನು ಗಣನೀಯವಾಗಿ ಹೆಚ್ಚಿಸಲು ಈ ಒಪ್ಪಂದದಲ್ಲಿ ಒಪ್ಪಿಕೊಳ್ಳಲಾಗಿದೆ. ಅಂದಾಜು 56,000 ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶದ ಸಂಪೂರ್ಣ ರಕ್ಷಣೆಯ ಹೊಣೆಯನ್ನು ಅಮೆರಿಕ ಸರ್ಕಾರ ಹೊರಲಿದೆ. ಪ್ರಸ್ತಾವಿತ ಒಪ್ಪಂದದ ಪ್ರಕಾರ, ನ್ಯಾಟೋ (NATO) ಸದಸ್ಯತ್ವ ಹೊಂದಿರದ ಯಾವುದೇ ದೇಶಗಳು ಗ್ರೀನ್‌ಲ್ಯಾಂಡ್‌ನಲ್ಲಿ ಸೇನಾ ನೆಲೆ ಹೊಂದುವುದನ್ನು ಹಾಗೂ ಪ್ರಮುಖ ವಲಯಗಳಲ್ಲಿ ಹೂಡಿಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ರಷ್ಯಾ ಮತ್ತು ಚೀನಾ ದೇಶಗಳು ಈ ಭಾಗದಲ್ಲಿ ಸೇನಾ ನೆಲೆ ಸ್ಥಾಪಿಸುವುದಕ್ಕೆ ಅಣೆಕಟ್ಟು ಹಾಕಿದಂತಾಗಿದೆ.

ಈ ಒಪ್ಪಂದದ ಅಡಿಯಲ್ಲಿ ಅಮೆರಿಕ ತನ್ನ ಹಾಲಿ ವಾಯುವ್ಯದ ಪಿಟುಫಿಕ್ (Pituffik) ಬಾಹ್ಯಾಕಾಶ ನೆಲೆಯನ್ನು ವಿಸ್ತರಿಸುವುದರ ಜೊತೆಗೆ, ತಕ್ಷಣವೇ ಸೂಕ್ತ ಸ್ಥಳಗಳಲ್ಲಿ ಎರಡು ಹೊಸ ಪ್ರಮುಖ ಮಿಲಿಟರಿ ನೆಲೆಗಳನ್ನು ನಿರ್ಮಿಸಲಿದೆ. ಭವಿಷ್ಯದಲ್ಲಿ ಗ್ರೀನ್‌ಲ್ಯಾಂಡ್‌ ಡೆನ್ಮಾರ್ಕ್‌ನಿಂದ ಬೇರ್ಪಟ್ಟು ಸ್ವತಂತ್ರ ದೇಶವಾದರೂ ಈ ಭದ್ರತಾ ಷರತ್ತುಗಳು ಜಾರಿಯಲ್ಲಿರಲಿವೆ. ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಟ್ರಂಪ್, "ಇದು ಯುರೋಪ್, ಅಮೆರಿಕ ಸೇರಿದಂತೆ ಎಲ್ಲರಿಗೂ ಅತ್ಯಂತ ಸಂತಸದ ವಿಷಯ. ಅದರಲ್ಲೂ ಗ್ರೀನ್‌ಲ್ಯಾಂಡ್‌ಗೆ ಇದೊಂದು ಅದ್ಭುತ ಅವಕಾಶವಾಗಲಿದೆ" ಎಂದು ತಿಳಿಸಿದ್ದಾರೆ.

2019 ರಿಂದಲೂ ಗ್ರೀನ್‌ಲ್ಯಾಂಡ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸುತ್ತಿದ್ದ ಟ್ರಂಪ್, ತಮ್ಮ ಎರಡನೇ ಅವಧಿಯಲ್ಲಿ NATO ಮಿತ್ರರಾಷ್ಟ್ರವಾದ ಡೆನ್ಮಾರ್ಕ್‌ನಿಂದ ಈ ಪ್ರದೇಶವನ್ನು ವಶಕ್ಕೆ ಪಡೆಯುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ತೀವ್ರ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿ, ಬಲವಂತದ ಸ್ವಾಧೀನವು 'ಅಟ್ಲಾಂಟಿಕ್ ಒಕ್ಕೂಟದ ಅಂತ್ಯ'ಕ್ಕೆ ಹಾದಿಮಾಡಿಕೊಡುತ್ತದೆ ಎಂದು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಎಚ್ಚರಿಸಿದ್ದರು. ಆದಾಗ್ಯೂ, ತಿಂಗಳುಗಳ ಕಾಲ ನಡೆದ ಸುದೀರ್ಘ ಮಾತುಕತೆಯ ನಂತರ ಈ ಮಧ್ಯಮ ಮಾರ್ಗದ ಒಪ್ಪಂದವನ್ನು ರೂಪಿಸಲಾಗಿದೆ. ಗ್ರೀನ್‌ಲ್ಯಾಂಡ್‌ನಲ್ಲಿ ಭಾರೀ ಪ್ರಮಾಣದ ರೇರ್ ಅರ್ಥ್ ಮೆಟಿರಿಯಲ್ಸ್‌, ಅಪರೂಪದ ಖನಿಜಗಳು ಮತ್ತು ತೈಲ ಸಂಪತ್ತಿದ್ದು, ಮಂಜುಗಡ್ಡೆ ಕರಗುತ್ತಿರುವುದರಿಂದ ಹೊಸ ನೌಕಾ ಸಂಚಾರ ಮಾರ್ಗಗಳು ತೆರೆದುಕೊಳ್ಳುತ್ತಿರುವುದು ಅಮೆರಿಕದ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ.

Category
ಕರಾವಳಿ ತರಂಗಿಣಿ