ಮಾಸ್ಕೋ : ರಷ್ಯಾದ ಮೂರು ದಿನಗಳ ಸಂಸತ್ ಚುನಾವಣೆಯ ಅಂತಿಮ ದಿನದಂದು ರಾಜಧಾನಿ ಮಾಸ್ಕೋ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಬೃಹತ್ ಪ್ರಮಾಣದ ಡ್ರೋನ್ ದಾಳಿ ನಡೆದಿದೆ. ಶನಿವಾರದಿಂದೀಚೆಗೆ ದೇಶದ ವಿವಿಧ ಭಾಗಗಳಲ್ಲಿ 1,600ಕ್ಕೂ ಹೆಚ್ಚು ಡ್ರೋನ್‌ಗಳನ್ನು ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿದ್ದು, ಅವುಗಳಲ್ಲಿ ಸುಮಾರು 450 ಡ್ರೋನ್‌ಗಳು ನೇರವಾಗಿ ಮಾಸ್ಕೋ ನಗರವನ್ನು ಗುರಿಯಾಗಿಸಿಕೊಂಡಿದ್ದವು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯನ್ನು ರಾಜಧಾನಿಯ ಮೇಲೆ ನಡೆದ ಅತ್ಯಂತ ದೊಡ್ಡ ಡ್ರೋನ್ ದಾಳಿ ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಬಣ್ಣಿಸಿದ್ದಾರೆ.
ದಾಳಿಯ ಪರಿಣಾಮವಾಗಿ ಮಾಸ್ಕೋದ ಪ್ರಮುಖ ತೈಲ ಸಂಸ್ಕರಣಾಗಾರಕ್ಕೆ ಹಾನಿಯುಂಟಾಗಿದ್ದು, ಪ್ರದೇಶದಲ್ಲಿ ಸರಣಿ ಸ್ಫೋಟಗಳು ಮತ್ತು ದಟ್ಟ ಹೊಗೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಭೀಕರ ಘಟನೆಯಲ್ಲಿ 44 ವರ್ಷದ ಮಹಿಳೆ ಹಾಗೂ ವೃದ್ಧರೊಬ್ಬರು ಸೇರಿದಂತೆ ಇಬ್ಬರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಮೆನ್ಸ್ಕೊಯೆ ಪ್ರದೇಶದ 21 ಅಂತಸ್ತಿನ ವಸತಿ ಕಟ್ಟಡವೊಂದಕ್ಕೆ ಡ್ರೋನ್ ಅಪ್ಪಳಿಸಿದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 400 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸೆಪ್ಟೆಂಬರ್ 18ರಂದು ಆರಂಭವಾದ ರಷ್ಯಾದ ಸಂಸತ್ ಚುನಾವಣೆ ಸೆಪ್ಟೆಂಬರ್ 20ರಂದು ಮುಕ್ತಾಯಗೊಳ್ಳಲಿದ್ದು, ಮತದಾನ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ ಎಂದು ಮಾಸ್ಕೋ ಮೇಯರ್ ಆರೋಪಿಸಿದ್ದಾರೆ. 2022ರಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದ ಬಳಿಕ ರಷ್ಯಾದಲ್ಲಿ ನಡೆಯುತ್ತಿರುವ ಮೊದಲ ಸಂಸತ್ ಚುನಾವಣೆ ಇದಾಗಿದೆ. ರಷ್ಯಾದ ರಕ್ಷಣಾ ಸಚಿವಾಲಯವು ವಿವಿಧ ಪ್ರದೇಶಗಳಲ್ಲಿ 1,100ಕ್ಕೂ ಹೆಚ್ಚು ಡ್ರೋನ್‌ಗಳನ್ನು ತಡೆಹಿಡಿದಿರುವುದಾಗಿ ತಿಳಿಸಿದ್ದು, ಈ ಬೃಹತ್ ದಾಳಿಯ ಕುರಿತು ಉಕ್ರೇನ್ ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.