ಇಸ್ಲಾಮಬಾದ್ : ಬಡತನ ಮತ್ತು ಕಡಲಾಚೆಯ ಇಂಧನ ದರ ಏರಿಕೆಯಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಇದೀಗ ಅಕ್ಷರಶಃ ಲಾಕ್‌ಡೌನ್ ಮಾದರಿಯ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಅಭಾವ ಹಾಗೂ ಆರ್ಥಿಕ ಒತ್ತಡವನ್ನು ನಿಭಾಯಿಸಲು ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ದೇಶಾದ್ಯಂತ ಕಠಿಣ ಮಿತವ್ಯಯ ಮತ್ತು ಇಂಧನ ಸಂರಕ್ಷಣಾ ನಿಯಮಗಳನ್ನು ಘೋಷಿಸಿದೆ. ಕೋವಿಡ್ ಅವಧಿಯ ನಿರ್ಬಂಧಗಳನ್ನು ನೆನಪಿಸುವಂತೆ ಜಾರಿಯಾಗಿರುವ ಈ ಹೊಸ ನಿಯಮಗಳ ಅಡಿಯಲ್ಲಿ ಸಾರ್ವಜನಿಕ ಜೀವನ ಹಾಗೂ ಸರ್ಕಾರಿ ವಲಯಗಳ ಮೇಲೆ ಹಲವು ಮಿತಿಗಳನ್ನು ಹೇರಲಾಗಿದೆ.
ಹೊಸ ಆದೇಶದಂತೆ, ದೇಶಾದ್ಯಂತ ಎಲ್ಲಾ ಅಂಗಡಿ-ಮುಗ್ಗಟ್ಟುಗಳು, ಮಾರುಕಟ್ಟೆಗಳು ಹಾಗೂ ಶಾಪಿಂಗ್ ಮಾಲ್‌ಗಳು ಪ್ರತಿದಿನ ರಾತ್ರಿ 9 ಗಂಟೆಗೆ ಕಡ್ಡಾಯವಾಗಿ ಮುಚ್ಚಲ್ಪಡಲಿವೆ. ಮದುವೆ ಛತ್ರಗಳು ಮತ್ತು ಸಮಾರಂಭದ ಸಭಾಂಗಣಗಳನ್ನು ರಾತ್ರಿ 10 ಗಂಟೆಯೊಳಗೆ ಹಾಗೂ ರೆಸ್ಟೋರೆಂಟ್, ಕೆಫೆಗಳನ್ನು ರಾತ್ರಿ 11 ಗಂಟೆಯೊಳಗೆ ಬಂದ್ ಮಾಡಲು ಗಡುವು ವಿಧಿಸಲಾಗಿದೆ. ಸಾರ್ವಜನಿಕ ಸಮಾರಂಭಗಳಲ್ಲಿನ ಅತಿಯಾದ ಖರ್ಚು ಹಾಗೂ ಸಂಪನ್ಮೂಲ ಪೋಲು ತಡೆಯಲು, ಮದುವೆ ಸಮಾರಂಭಗಳಲ್ಲಿ ಕೇವಲ ಒಂದೇ ಖಾದ್ಯವನ್ನು (Single dish) ಮಾತ್ರ ಬಡಿಸಲು ಅನುಮತಿ ನೀಡಲಾಗಿದೆ.
ಸರ್ಕಾರಿ ವೆಚ್ಚಕ್ಕೆ ಕತ್ತರಿ ಹಾಕಲು ಮುಂದಾಗಿರುವ ಪಾಕಿಸ್ತಾನ ಕ್ಯಾಬಿನೆಟ್, ಯಾವುದೇ ಹೊಸ ಸರ್ಕಾರಿ ವಾಹನಗಳ ಖರೀದಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಹಾಗೂ ಕಾನೂನು ಜಾರಿ ಸಂಸ್ಥೆಗಳ ತುರ್ತು ವಾಹನಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಸರ್ಕಾರಿ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಹಂಚಿಕೆಯಲ್ಲಿ ಶೇಕಡಾ 50 ರಷ್ಟು ಕಡಿತಗೊಳಿಸಲಾಗಿದ್ದು, ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ.
ಸರ್ಕಾರಿ ಅಧಿಕಾರಿಗಳ ವಿದೇಶ ಪ್ರವಾಸದ ಮೇಲೆಯೂ ಕನಿಷ್ಠ ಮೂರು ತಿಂಗಳ ಕಾಲ ಕಠಿಣ ನಿರ್ಬಂಧ ಹೇರಲಾಗಿದ್ದು, ಅನಿವಾರ್ಯ ಪ್ರಯಾಣಕ್ಕೆ ಎಕಾನಮಿ ಕ್ಲಾಸ್ ಬಳಸಲು ಸೂಚಿಸಲಾಗಿದೆ. ಅನಗತ್ಯ ಸರ್ಕಾರಿ ಸೆಮಿನಾರ್, ತರಬೇತಿ ಕಾರ್ಯಕ್ರಮಗಳಿಗೆ ತಡೆ ನೀಡಲಾಗಿದ್ದು, ವೀಡಿಯೊ ಕಾನ್ಫರೆನ್ಸ್ ಮೂಲಕವೇ ಸಭೆಗಳನ್ನು ನಡೆಸಲು ನಿರ್ದೇಶಿಸಲಾಗಿದೆ. ವಿದೇಶಿ ನಿಯೋಗಗಳ ಗೌರವಾರ್ಥ ನಡೆಯುವ ಅಗತ್ಯ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಸಾಮಾನ್ಯ ಸರ್ಕಾರಿ ಔತಣಕೂಟಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಆದಾಗ್ಯೂ, ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆಗಳು, ಔಷಧಾಲಯಗಳು, ಪ್ರಯೋಗಾಲಯಗಳು, ಪೆಟ್ರೋಲ್ ಹಾಗೂ ಸಿಎನ್‌ಜಿ ಬಂಕ್‌ಗಳು, ಇವಿ ಚಾರ್ಜಿಂಗ್ ಕೇಂದ್ರಗಳು, ಬೇಕರಿಗಳು, ಜಿಮ್‌ಗಳು, ಐಟಿ ಕಂಪನಿಗಳು ಹಾಗೂ ಕಾಲ್ ಸೆಂಟರ್‌ಗಳಿಗೆ ಈ ಸಮಯದ ನಿರ್ಬಂಧಗಳಿಂದ ಸಡಿಲಿಕೆ ನೀಡಲಾಗಿದೆ. ಮಧ್ಯಪ್ರಾಚ್ಯದ ಸಂಘರ್ಷ ಹಾಗೂ ಇಂಧನ ಬಿಕ್ಕಟ್ಟಿನ ಕಾರಣದಿಂದ ಕಳೆದ ಮಾರ್ಚ್‌ನಲ್ಲೂ ಪಾಕಿಸ್ತಾನ ಶಾಲೆಗಳನ್ನು ಮುಚ್ಚಿ ಕಠಿಣ ನಿಯಮಗಳನ್ನು ಜಾರಿಗೊಳಿಸಿತ್ತು. ಪ್ರಸ್ತುತ ಜಾರಿಯಾಗಿರುವ ಈ ನೂತನ ಮಿತವ್ಯಯ ಕ್ರಮಗಳು ತಕ್ಷಣದಿಂದ ಜಾರಿಗೆ ಬಂದಿದ್ದು, ಕನಿಷ್ಠ ಮೂರು ತಿಂಗಳ ಕಾಲ ಮುಂದುವರಿಯಲಿವೆ.