ಸೌದಿ ಅರೇಬಿಯಾ : ದಶಕಗಳಿಂದ ಅಮೆರಿಕದ ಜೊತೆ ಗಟ್ಟಿ ಮಿಲಿಟರಿ ಮೈತ್ರಿ ಹೊಂದಿದ್ದೇವೆ ಎಂದು ನಂಬಿದ್ದ ಸೌದಿ ಅರೇಬಿಯಾಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ನಡೆ ತೀವ್ರ ಆಘಾತವನ್ನುಂಟುಮಾಡಿದೆ. ಯೆಮೆನ್‌ನ ಹೌತಿ ಬಂಡುಕೋರರ ನಿರಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಕಂಗಾಲಾಗಿರುವ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಅಮೆರಿಕದ ಮಿಲಿಟರಿ ನೆರವು ಕೋರಿ ಒಂದೇ ದಿನದಲ್ಲಿ ಎರಡು ಬಾರಿ ಅಧ್ಯಕ್ಷ ಟ್ರಂಪ್‌ಗೆ ಕರೆ ಮಾಡಿದ್ದರು. ಅಮೆರಿಕದ ಯುದ್ಧ ವಿಮಾನಗಳು ಹೌತಿ ನೆಲೆಗಳ ಮೇಲೆ ದಾಳಿ ನಡೆಸಿ ತಮ್ಮನ್ನು ರಕ್ಷಿಸಲಿವೆ ಎಂಬ ಸೌದಿಯ ನಿರೀಕ್ಷೆಯ ಹೊರತಾಗಿಯೂ, ಟ್ರಂಪ್ ಸೌದಿ ರಾಜನ ಸಾಲು ಸಾಲು ವಿನಂತಿಗಳನ್ನು ಖಂಡಾತುಂಡವಾಗಿ ನಿರಾಕರಿಸಿದ್ದಾರೆ.
ಅಮೆರಿಕದ ಈ ವಿಶ್ವಾಸದ್ರೋಹದ ಹಿಂದೆ ಅಮೆರಿಕನ್ ಅಧಿಕಾರಿಗಳು ಮತ್ತು ಹೌತಿ ಬಂಡುಕೋರರ ನಡುವೆ ನಡೆದ ರಹಸ್ಯ ಸಭೆಯೇ ಕಾರಣ ಎಂಬ ಆಘಾತಕಾರಿ ಸಂಗತಿ ಸೌದಿಗೆ ತಿಳಿದುಬಂದಿದೆ. ಪವಿತ್ರ ನಗರ ಮೆಕ್ಕಾದತ್ತಲೂ ಹೌತಿಗಳು ಕ್ಷಿಪಣಿ ತೂರುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ಬರಬಹುದು ಎಂದು ಸೌದಿ ಅರೇಬಿಯಾ ಈಜಿಪ್ಟ್‌ನತ್ತ ನೋಡಿತಾದರೂ, ಅಮೆರಿಕದ ಬೆಂಬಲವಿಲ್ಲದೆ ಈಜಿಪ್ಟ್ ಕೂಡ ಸಹಾಯಕ್ಕೆ ಬರಲು ಸಾಧ್ಯವಿಲ್ಲವೆಂದಿದೆ. ದಶಕಗಳಿಂದ ಸೌದಿಯಲ್ಲಿ ಮಿಲಿಟರಿ ನೆಲೆ ಹೊಂದಿದ್ದ ಅಮೆರಿಕ ಈಗ ಬೆನ್ನಿಗೆ ಚೂರಿ ಹಾಕಿದ್ದೇಕೆ ಎಂಬುದನ್ನು ವಿದೇಶಾಂಗ ವ್ಯವಹಾರಗಳ ತಜ್ಞ ಹಾಗೂ ಜೆಎನ್‌ಯುನ ನಿವೃತ್ತ ಪ್ರಾಧ್ಯಾಪಕ ಡಾ. ಎಕೆ ಪಾಷಾ ವಿವರವಾಗಿ ವಿಶ್ಲೇಷಿಸಿದ್ದಾರೆ.
2026ರ ಆರಂಭದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತ್ತು. ಸೌದಿಯ ತೈಲ ಸಾಗಣೆಗೆ ಈ ಮಾರ್ಗವೇ ಜೀವಾಳವಾಗಿದ್ದರಿಂದ ಸೌದಿ ತೀವ್ರ ಬಿಕ್ಕಟ್ಟಿಗೆ ಸಿಲುಕಿತು. ಬಳಿಕ ಮೇ 2026 ರಲ್ಲಿ ಅಮೆರಿಕ 'ಆಪರೇಷನ್ ಪ್ರಾಜೆಕ್ಟ್ ಫ್ರೀಡಂ' ಆರಂಭಿಸಿ ತನ್ನ ಯುದ್ಧನೌಕೆಗಳನ್ನು ನಿಯೋಜಿಸಿತಾದರೂ, ಈ ಬಗ್ಗೆ ಸೌದಿ ಅರೇಬಿಯಾವನ್ನು ಸಂಪರ್ಕಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಸೌದಿ, ಇರಾನ್‌ನ ಪ್ರತೀಕಾರಕ್ಕೆ ಹೆದರಿ ಅಮೆರಿಕಗೆ ತನ್ನ ಭೂಮಿ ಹಾಗೂ ವಾಯುಪ್ರದೇಶ ಬಳಸಲು ಅನುಮತಿ ನೀಡಲಿಲ್ಲ. ಸೌದಿಯ ಈ ನಡೆಯಿಂದ ಕೆರಳಿದ ಅಮೆರಿಕ, ಇರಾನ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೇ ಸೌದಿಗೆ ನೀಡುವುದಿಲ್ಲವೆಂದು ಬೆದರಿಕೆಯೊಡ್ಡಿ ದಶಕಗಳ ಮೈತ್ರಿಗೆ ತಣ್ಣೀರೆರಚಿದೆ.