ನ್ಯೂಜಿಲೆಂಡ್ : ನ್ಯೂಜಿಲೆಂಡ್ ಸಂಸತ್ತು ಭಾರತದೊಂದಿಗಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಬುಧವಾರ ಅಧಿಕೃತವಾಗಿ ಅನುಮೋದನೆ ನೀಡಿದೆ. ಸಂಸತ್ತಿನಲ್ಲಿ ನಡೆದ ಮಸೂದೆಯ ಮತದಾನದಲ್ಲಿ ಒಪ್ಪಂದದ ಪರವಾಗಿ 93 ಹಾಗೂ ವಿರುದ್ಧವಾಗಿ 29 ಮತಗಳು ಬಿದ್ದಿದ್ದು, ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಜಾರಿಗೆ ಹಾದಿ ಸುಗಮವಾಗಿದೆ.
ಈ ಪ್ರಮುಖ ಬೆಳವಣಿಗೆಯನ್ನು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ತಮ್ಮ 'ಎಕ್ಸ್' ಖಾತೆಯ ಮೂಲಕ ಹರ್ಷದಿಂದ ಸ್ವಾಗತಿಸಿದ್ದಾರೆ. "ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದರು. ಆದರೆ, ನಮ್ಮ 'ನ್ಯಾಷನಲ್' ಪಕ್ಷವು ಮೊದಲ ಅವಧಿಯಲ್ಲೇ ನೀಡಿದ್ದ ಭರವಸೆಯಂತೆ ಈ ಮಹತ್ವದ ಒಪ್ಪಂದಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರಕಿಸಿಕೊಟ್ಟಿದೆ" ಎಂದು ಅವರು ಬರೆದುಕೊಂಡಿದ್ದಾರೆ.
ಈ ಒಪ್ಪಂದವು ಭಾರತದ 140 ಕೋಟಿ ಗ್ರಾಹಕರ ಬೃಹತ್ ಮಾರುಕಟ್ಟೆಗೆ ನ್ಯೂಜಿಲೆಂಡ್‌ನ ಉತ್ಪನ್ನ ಹಾಗೂ ಸೇವೆಗಳಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಇದು ಪ್ರಬಲ ಶಕ್ತಿ ತುಂಬಲಿದ್ದು, ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಹಾಗೂ ಹೆಚ್ಚಿನ ಆದಾಯವನ್ನು ತರಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಮೂಲಭೂತ ಆರ್ಥಿಕತೆಯನ್ನು ಬಲಪಡಿಸಿ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಈ ವ್ಯಾಪಾರ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಲಿದೆ.