ರಿಯಾದ್: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರವಾದ ಮೆಕ್ಕಾದ ಭದ್ರತೆಯ ವಿಷಯದಲ್ಲಿ 'ರೆಡ್‌ಲೈನ್' ದಾಟದಂತೆ ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟ ಯೆಮೆನ್‌ನ ಹೌತಿ ಬಂಡುಕೋರರಿಗೆ ಕಠಿಣ ಎಚ್ಚರಿಕೆ ನೀಡಿದೆ. ಮೆಕ್ಕಾದ ಸುತ್ತಮುತ್ತಲಿನ ನಿಷೇಧಿತ ವಾಯುಪ್ರದೇಶವನ್ನು ಪ್ರವೇಶಿಸುವ ಮುನ್ನವೇ ಮಂಗಳವಾರ ಸಂಜೆ ಹೌತಿ ಪಡೆಯ ಡ್ರೋನ್ ಒಂದನ್ನು ರಾಯಲ್ ಸೌದಿ ವಾಯು ರಕ್ಷಣಾ ಪಡೆ ಯಶಸ್ವಿಯಾಗಿ ತಡೆಹಿಡಿದು ನಾಶಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲ್ಕಿ, ಮೆಕ್ಕಾ ಹಾಗೂ ಯಾತ್ರಾರ್ಥಿಗಳ ಭದ್ರತೆಯು ತಮಗೆ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ. ಈ ಉಗ್ರಗಾಮಿ ಪಡೆಯ ಭಯೋತ್ಪಾದಕ ಕೃತ್ಯಗಳ ವಿರುದ್ಧ ಅಗತ್ಯ ಹಾಗೂ ಕಠಿಣ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲು ಮೈತ್ರಿಕೂಟದ ಜಂಟಿ ಪಡೆಗಳು ಹಿಂಜರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್ ಬೆಂಬಲಿತ ಹೌತಿಗಳು ಮತ್ತು ಸೌದಿ ಬೆಂಬಲಿತ ಯೆಮೆನ್ ಸರ್ಕಾರದ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಕೆಂಪು ಸಮುದ್ರದಲ್ಲಿ ಸೌದಿ ಅರೇಬಿಯಾದ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಸೌದಿ ವಿರುದ್ಧ ಸಮುದ್ರ ದಿಗ್ಬಂಧನ ಘೋಷಿಸಿರುವ ಹೌತಿಗಳ ಈ ನಡೆಯಿಂದಾಗಿ ಈ ಭಾಗದಲ್ಲಿ తీవ్ర ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇನ್ನೊಂದೆಡೆ ಸೌದಿ ಮೈತ್ರಿಕೂಟದ ಹೇಳಿಕೆಯನ್ನು ಹೌತಿ ಪಡೆಯ ಪಾಲಿಟ್‌ಬ್ಯೂರೋ ಸದಸ್ಯ ಹಝೆಮ್ ಅಲ್-ಅಸ್ಸಾದ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮೆಕ್ಕಾವನ್ನು ಗುರಿಯಾಗಿಸಲಾಗಿದೆ ಎಂಬುದು ಹಳೆಯ ಕಟ್ಟುಕಥೆಯಾಗಿದ್ದು, ಇಂತಹ ಹೇಳಿಕೆಗಳಿಂದ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.