image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಬ್ರಿಕ್ಸ್ ಶಕ್ತಿ ವೃದ್ಧಿ ನಡುವೆಯೇ ಭಾರತಕ್ಕೆ ಬಿಗ್ ಶಾಕ್: ಸೌರ ಉತ್ಪನ್ನಗಳ ಮೇಲೆ ಬೃಹತ್ ಸುಂಕ ವಿಧಿಸಲು ಅಮೆರಿಕ ಸಿದ್ಧತೆ

ಬ್ರಿಕ್ಸ್ ಶಕ್ತಿ ವೃದ್ಧಿ ನಡುವೆಯೇ ಭಾರತಕ್ಕೆ ಬಿಗ್ ಶಾಕ್: ಸೌರ ಉತ್ಪನ್ನಗಳ ಮೇಲೆ ಬೃಹತ್ ಸುಂಕ ವಿಧಿಸಲು ಅಮೆರಿಕ ಸಿದ್ಧತೆ

ನ್ಯೂಯೋರ್ಕ್ : ಬ್ರಿಕ್ಸ್ (BRICS) ಶೃಂಗಸಭೆಯ ಯಶಸ್ಸು ಮತ್ತು ಜಾಗತಿಕ ದಕ್ಷಿಣದ ದೇಶಗಳಲ್ಲಿ (Global South) ಹೆಚ್ಚುತ್ತಿರುವ ಒಗ್ಗಟ್ಟು ಅಮೆರಿಕವನ್ನು ಕಂಗಾಲುಗೊಳಿಸಿದೆ. ಭಾರತದ ನೇತೃತ್ವದಲ್ಲಿ ಉದಯೋನ್ಮುಖ ಆರ್ಥಿಕತೆಗಳು ಸ್ವಾವಲಂಬಿ ವ್ಯಾಪಾರಕ್ಕಾಗಿ ಹೊಸ ಹಾದಿ ಕಂಡುಕೊಳ್ಳುತ್ತಿರುವುದಕ್ಕೆ ಪ್ರತಿಯಾಗಿ, ಅಮೆರಿಕದ ವಾಣಿಜ್ಯ ಇಲಾಖೆಯು ಭಾರತ ಸೇರಿದಂತೆ ಏಷ್ಯಾದ ದೇಶಗಳ ವಿರುದ್ಧ ಕಠಿಣ ವಾಣಿಜ್ಯ ನಿರ್ಬಂಧಕ್ಕೆ ಮುಂದಾಗಿದೆ. ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್‌ನಿಂದ ಆಮದು ಮಾಡಿಕೊಳ್ಳುವ ಸೌರ ಕೋಶ (Solar Cells) ಹಾಗೂ ಸೌರ ಫಲಕಗಳ (Solar Panels) ಮೇಲೆ ಭಾರಿ ಪ್ರಮಾಣದ ಸುಂಕ ವಿಧಿಸಲು ಯುಎಸ್ ರಂಗಸಿದ್ಧತೆ ನಡೆಸಿದೆ.

ಅಮೆರಿಕದ ಮಾರುಕಟ್ಟೆಗೆ ಈ ಮೂರು ದೇಶಗಳಿಂದ ತೀರಾ ಅಗ್ಗದ ದರದಲ್ಲಿ ಸೌರ ಉತ್ಪನ್ನಗಳು ಹರಿದುಬರುತ್ತಿದ್ದು, ಸ್ಥಳೀಯ ಸರ್ಕಾರಗಳಿಂದ ಇವು ಅನ್ಯಾಯದ ಸಬ್ಸಿಡಿ ಪಡೆಯುತ್ತಿವೆ ಎಂದು ಅಮೆರಿಕ ವಾಣಿಜ್ಯ ಇಲಾಖೆ ಆರೋಪಿಸಿದೆ. ವಿದೇಶಿ ಕಂಪನಿಗಳ ಈ ನಡೆಯಿಂದಾಗಿ ಅಮೆರಿಕದ ದೇಶೀಯ ಸೌರ ತಯಾರಕರಿಗೆ ಗಮನಾರ್ಹ ನಷ್ಟ ಉಂಟಾಗುತ್ತಿದೆ ಎಂಬುದು ಇಲಾಖೆಯ ವಾದವಾಗಿದೆ. ಈ ವಿಷಯದ ಕುರಿತು ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರ ಆಯೋಗ (USITC) ತನಿಖೆ ನಡೆಸುತ್ತಿದ್ದು, ಅಕ್ಟೋಬರ್ 14 ರಂದು ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ಈ ಆಮದಿನಿಂದ ಅಮೆರಿಕದ ಉದ್ಯಮಕ್ಕೆ ನೇರ ಹಾನಿಯಾಗಿದೆ ಎಂದು ಆಯೋಗ ದೃಢಪಡಿಸಿದರೆ, ನವೆಂಬರ್‌ನಲ್ಲಿ ಅಧಿಕೃತ ಸುಂಕದ ಅಂತಿಮ ಆದೇಶ ಹೊರಬೀಳಲಿದೆ.

ಪ್ರಸ್ತಾವಿತ ಸುಂಕದ ಪ್ರಕಾರ, ಭಾರತೀಯ ಸೌರಶಕ್ತಿ ಕಂಪನಿಗಳ ಮೇಲೆ ಬರೋಬ್ಬರಿ 123.04% ರಷ್ಟು ಡಂಪಿಂಗ್ ವಿರೋಧಿ ಸುಂಕ (Anti-Dumping Duty) ಹಾಗೂ ಅನ್ಯಾಯದ ಸಬ್ಸಿಡಿ ನೆಪದಲ್ಲಿ 126.09% ರಷ್ಟು ಪ್ರತಿ-ಸುಂಕವನ್ನು (Countervailing Duty) ವಿಧಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಇಂಡೋನೇಷ್ಯಾದ ಮೇಲೆ 94.36% ಡಂಪಿಂಗ್ ವಿರೋಧಿ ಸುಂಕ ಮತ್ತು 73.2% ರಿಂದ 173.7% ವರೆಗೆ ಪ್ರತಿ-ಸುಂಕ ಹೇರಲಾಗುತ್ತಿದ್ದರೆ, ಲಾವೋಸ್‌ನ ಉತ್ಪನ್ನಗಳ ಮೇಲೆ 65.43% ಡಂಪಿಂಗ್ ವಿರೋಧಿ ಹಾಗೂ 82.03% ರಿಂದ 153.67% ವರೆಗೆ ಪ್ರತಿ-ಸುಂಕ ಹೇರಲು ಸಿದ್ಧತೆ ನಡೆದಿದೆ.

ಅಮೆರಿಕದ ಪ್ರಮುಖ ಸೌರ ತಯಾರಕರಾದ ಫಸ್ಟ್ ಸೋಲಾರ್, ಹನ್ವಾ ಕ್ಯೂಸೆಲ್ಸ್ ಮತ್ತು ಮಿಷನ್ ಸೋಲಾರ್ ಎನರ್ಜಿಯನ್ನೊಳಗೊಂಡ 'ಅಲೈಯನ್ಸ್ ಫಾರ್ ಅಮೇರಿಕನ್ ಸೋಲಾರ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಟ್ರೇಡ್' ನೀಡಿದ ದೂರಿನ ಮೇರೆಗೆ ಈ ತನಿಖೆ ಆರಂಭವಾಗಿತ್ತು. ಈ ನಿರ್ಧಾರವನ್ನು ಸ್ವಾಗತಿಸಿರುವ ಸಂಸ್ಥೆಯ ವಕೀಲ ಟಿಮ್ ಬ್ರೈಟ್‌ಬಿಲ್, ಇದು ಅಮೆರಿಕನ್ ಕಂಪನಿಗಳಿಗೆ ನ್ಯಾಯಯುತ ಸ್ಪರ್ಧೆಯನ್ನು ಪುನಃಸ್ಥಾಪಿಸುವ ಪ್ರಮುಖ ಹೆಜ್ಜೆಯಾಗಿದ್ದು, ಏಷ್ಯಾದ ದೇಶಗಳಿಂದ ಆಗುವ ಆಮದನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ