ಪ್ಯಾರಿಸ್: ಪಾಶ್ಚಿಮಾತ್ಯ ದೇಶಗಳಲ್ಲಿ ತೀವ್ರ ಬಿಸಿಗಾಳಿಗೆ ರಸ್ತೆಯ ಡಾಂಬರು ನೀರಿನಂತೆ ಹರಿಯುತ್ತಿರುವುದು, ಪ್ಲಾಸ್ಟಿಕ್ ವಸ್ತುಗಳು ಹಾಗೂ ರಸ್ತೆ ಸಿಗ್ನಲ್ ದೀಪಗಳು ಕರಗುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಭೀಕರ ಹವಾಮಾನ ವೈಪರೀತ್ಯಕ್ಕೆ ಮೂಲ ಕಾರಣವೇನು ಎಂಬುದನ್ನು ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸ್ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.
ಮಾನವ ಇತಿಹಾಸದಲ್ಲೇ ಕಳೆದ ಆಗಸ್ಟ್ ತಿಂಗಳು ಅತ್ಯಂತ ಗರಿಷ್ಠ ತಾಪಮಾನ ದಾಖಲಿಸಿದ ತಿಂಗಳಾಗಿ ಹೊರಹೊಮ್ಮಿದೆ. ಈ ಅವಧಿಯಲ್ಲಿ ಜಾಗತಿಕ ಸರಾಸರಿ ತಾಪಮಾನವು 16.96 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಜುಲೈ 2023ರ ದಾಖಲೆಯನ್ನು 0.01 ಡಿಗ್ರಿ ಸೆಲ್ಸಿಯಸ್‌ನಷ್ಟು ಮೀರಿಸಿದೆ. ವಿಜ್ಞಾನಿಗಳ ಪ್ರಕಾರ, ಕಳೆದ 1 ಲಕ್ಷ ವರ್ಷಗಳಲ್ಲೇ ಮಾನವ ಕುಲ ಇಂತಹ ಅತ್ಯಂತ ಭೀಕರ ತಾಪಮಾನವನ್ನು ಎದುರಿಸಿರಲಿಲ್ಲ. ಈ ತೀವ್ರ ಶಾಖದಿಂದ ಭೂಮಿಯ ಮೇಲ್ಮೈ ಮಾತ್ರವಲ್ಲದೆ ಸಮುದ್ರಗಳ ಉಷ್ಣಾಂಶವೂ ಯರ್ರಾಬಿರ್ರಿ ಏರಿಕೆಯಾಗಿದ್ದು, ಪಶ್ಚಿಮ ಯುರೋಪ್ ತನ್ನ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನದ ಬೇಸಿಗೆಯನ್ನು ಎದುರಿಸಿದೆ.
ಕಲ್ಲಿದ್ದಲು, ತೈಲ ಮತ್ತು ಅನಿಲದಂತಹ ಪಳೆಯುಳಿಕೆ ಇಂಧನಗಳ ಅತಿಯಾದ ಬಳಕೆಯಿಂದಾಗಿ, ಕೈಗಾರಿಕಾ ಪೂರ್ವ ಯುಗಕ್ಕೆ ಹೋಲಿಸಿದರೆ ಭೂಮಿಯ ಉಷ್ಣಾಂಶ ಈಗಾಗಲೇ 1.4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಪರಿಣಾಮವಾಗಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ವರದಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಮಾನವರು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಭೂಮಿಯು ಇಂತಹುದೇ ಭೀಕರ ಪರಿಸ್ಥಿತಿಗೆ ತಳ್ಳಲ್ಪಡಲಿದೆ ಎಂದು ಎಚ್ಚರಿಸಿದೆ.