ಜಪಾನ್ : ಭೂಮಿಯ ಅಭಾವ ಎದುರಿಸುತ್ತಿರುವ ಜಪಾನ್ ದೇಶವು ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಖಾಲಿ ಅಣೆಕಟ್ಟುಗಳು ಹಾಗೂ ಜಲಾಶಯಗಳ ಮೇಲ್ಮೈಯಲ್ಲಿ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ನಿರ್ಮಿಸುವ ಮೂಲಕ ಜಗತ್ತಿಗೆ ಹೊಸ ಹಾದಿ ತೋರಿಸಿಕೊಟ್ಟಿತ್ತು. 'ಕ್ಯೋಸೆರಾ ಟಿಸಿಎಲ್ ಸೋಲಾರ್' ಜಂಟಿ ಉದ್ಯಮದ ಸಹಯೋಗದೊಂದಿಗೆ 2018ರ ಮಾರ್ಚ್ ವೇಳೆಗೆ ಚಿಬಾ ಪ್ರಿಫೆಕ್ಚರ್‌ನ ಯಮಕುರಾ ಅಣೆಕಟ್ಟು ಜಲಾಶಯದಲ್ಲಿ 44 ಎಕರೆ ಪ್ರದೇಶದಷ್ಟು ವಿಸ್ತಾರವಾದ ಬೃಹತ್ ತೇಲುವ ಸೌರ ಸ್ಥಾವರವನ್ನು ಸ್ಥಾಪಿಸಲಾಗಿತ್ತು. ಸುಮಾರು 50,904 ಸೌರ ಮಾಡ್ಯೂಲ್‌ಗಳನ್ನು ಒಳಗೊಂಡಿದ್ದ ಈ ಸ್ಥಾವರವು ನಿತ್ಯ 13.7 ಮೆಗಾವ್ಯಾಟ್ ಹಾಗೂ ವಾರ್ಷಿಕವಾಗಿ ಅಂದಾಜು 16,170 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಸುಮಾರು 4,970 ಮನೆಗಳ ದೈನಂದಿನ ವಿದ್ಯುತ್ ಅಗತ್ಯವನ್ನು ಪೂರೈಸುತ್ತಿತ್ತು.
ಆದರೆ, ತಂತ್ರಜ್ಞರ ಸುದೀರ್ಘ ಶ್ರಮದ ಫಲವಾದ ಈ ಯೋಜನೆಗೆ ನೈಸರ್ಗಿಕ ವಿಕೋಪ ದೊಡ್ಡ ಸವಾಲಾಗಿ ಪರಿಣಮಿಸಿತು. 2019ರ ಸೆಪ್ಟೆಂಬರ್‌ನಲ್ಲಿ ಗಂಟೆಗೆ 200 ಕಿಲೋಮೀಟರ್ వేಗದ ಭೀಕರ ಟೈಫೂನ್ ಚಂಡಮಾರುತವು ಈ ತೇಲುವ ಸೌರ ಸ್ಥಾವರವನ್ನು ಅಲ್ಲೋಕಲ್ಲೋಲಗೊಳಿಸಿತು. ಭಾರಿ ಗಾಳಿಯ ರಭಸಕ್ಕೆ ಪ್ಯಾನಲ್‌ಗಳು ಒಂದಕ್ಕೊಂದು ಡಿಕ್ಕಿ ಹೊಡೆದು, ಪ್ರವಾಹ ಸದೃಶ ವಾತಾವರಣದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನೀರಿನ ಮೇಲೆಯೇ ಬೆಂಕಿ ಹೊತ್ತಿಕೊಂಡಿತು. ಪರಿಣಾಮವಾಗಿ 50ಕ್ಕೂ ಹೆಚ್ಚು ಪ್ಯಾನಲ್‌ಗಳು ಸುಟ್ಟು ಭಸ್ಮವಾಗಿ ಜಪಾನ್‌ನ ಈ ಮಹತ್ವಾಕಾಂಕ್ಷಿ ಯೋಜನೆ ತೀವ್ರ ಹಾನಿಗೊಳಗಾಯಿತು.
ಈ ದುರಂತದ ನಂತರ ಜಪಾನ್‌ನ ಸಚಿವಾಲಯವು ನಡೆಸಿದ ತನಿಖೆಯಲ್ಲಿ ಸ್ಥಾವರವನ್ನು ಹಿಡಿದಿಟ್ಟುಕೊಳ್ಳಲು ಬಳಸಲಾಗಿದ್ದ 420 ಆಂಕರ್‌ಗಳಲ್ಲಿ ದಕ್ಷಿಣ-ಮಧ್ಯ ಭಾಗದಲ್ಲಿದ್ದ 7 ಪ್ರಮುಖ ಆಂಕರ್‌ಗಳು ತೀವ್ರ ಗಾಳಿಗೆ ಕಿತ್ತುಬಂದಿದ್ದು ಬೆಳಕಿಗೆ ಬಂದಿತು. ಇದರಿಂದಾಗಿ ಇಡೀ ಸ್ಥಾವರದ ಸಮತೋಲನ ತಪ್ಪಿ ಹಾನಿ ಸಂಭವಿಸಿತ್ತು. ಆದಾಗ್ಯೂ, ಈ ಹಿನ್ನಡೆಯಿಂದ ಜಪಾನಿ ಎಂಜಿನಿಯರ್‌ಗಳು ದೃತಿಗೆಡಲಿಲ್ಲ. ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು, ಯೋಜನೆಯನ್ನು ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಿದರು. ಒಂದೇ ಬೃಹತ್ ಸಂಕೀರ್ಣದ ಬದಲಿಗೆ ಸಣ್ಣ ಚದರ ಆಕಾರದ ಪ್ರತ್ಯೇಕ ದ್ವೀಪಗಳ ಮಾದರಿಯಲ್ಲಿ, ಹೆಚ್ಚಿನ ವಾತಾವರಣದ ಒತ್ತಡವನ್ನು ತಡೆದುಕೊಳ್ಳುವಂತೆ ಸ್ಥಾವರವನ್ನು ಪುನರ್‌ನಿರ್ಮಿಸಲಾಯಿತು.
ಅತ್ಯಂತ ಕಠಿಣ ಪರಿಶ್ರಮ ಮತ್ತು ಸುಧಾರಿತ ತಂತ್ರಜ್ಞಾನದ ಫಲವಾಗಿ 2021ರ ಅಕ್ಟೋಬರ್ ಹೊತ್ತಿಗೆ 14 ಮೆಗಾವ್ಯಾಟ್ ಸಾಮರ್ಥ್ಯದ ಈ ತೇಲುವ ಸೌರ ಸ್ಥಾವರವನ್ನು ಯಶಸ್ವಿಯಾಗಿ ಪುನಃ ಕಾರ್ಯಾರಂಭಗೊಳಿಸಲಾಯಿತು. ನೈಸರ್ಗಿಕ ವಿಕೋಪಗಳ ಮುಂದೆ ಎಷ್ಟೇ ಸವಾಲುಗಳು ಎದುರಾದರೂ ಮರಳಿ ಎದ್ದು ನಿಲ್ಲುವ ಜಪಾನಿಯರ ಅಚಲ ಚೇತನ ಮತ್ತು ತಾಂತ್ರಿಕ ಪ್ರಬುದ್ಧತೆಗೆ ಈ ಯೋಜನೆಯ ಯಶಸ್ವಿ ಪುನರ್ನಿರ್ಮಾಣವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.