ಟೆಲ್ ಅವೀವ್: 2023ರ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ್ದ ಭೀಕರ ದಾಳಿಯ ಮಾದರಿಯಲ್ಲೇ, ಅದಕ್ಕಿಂತಲೂ ಅತ್ಯಂತ ಭೀಕರವಾದ ದಾಳಿ ನಡೆಸಲು ಇರಾನ್ ಬೃಹತ್ ಸಂಚು ರೂಪಿಸುತ್ತಿದೆ ಎಂದು ಇಸ್ರೇಲಿ ಗುಪ್ತಚರ ಸಂಸ್ಥೆಗಳ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಇರಾನ್ ತನ್ನ ಪ್ರಾಕ್ಸಿ ಸಂಘಟನೆಗಳನ್ನು ಒಟ್ಟುಗೂಡಿಸಿ ಇಸ್ರೇಲ್ ವಿರುದ್ಧ ಬೃಹತ್ ಪ್ರಮಾಣದ ‘ಬಹು-ರಂಗಗಳ’ (Multi-front) ದಾಳಿ ನಡೆಸಲು ಹೊರಟಿದೆ. ಹಮಾಸ್, ಹೆಜ್ಬುಲ್ಲಾ, ಹೂತಿ ಬಂಡುಕೋರರು ಸೇರಿದಂತೆ ಇರಾನ್ ಬೆಂಬಲಿತ ಸಂಘಟನೆಗಳನ್ನು ಬಳಸಿ, ಮುಂಬರುವ ಯಹೂದಿ ಹಬ್ಬಗಳ ಸಂದರ್ಭದಲ್ಲಿ ಈ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಕಳವಳ ವ್ಯಕ್ತಪಡಿಸಿದ್ದು, ಭದ್ರತಾ ಪಡೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.
2023ರ ದಾಳಿಯ ವೇಳೆ ಹಮಾಸ್ ಮಾತ್ರ ಮುಂಚೂಣಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಆದರೆ ಈ ಬಾರಿ ಲೆಬನಾನಿನ ಹೆಜ್ಬುಲ್ಲಾ, ಗಾಜಾದ ಹಮಾಸ್, ಯೆಮೆನ್‌ನ ಹೂತಿ ಬಂಡುಕೋರರು ಹಾಗೂ ಇರಾಕ್‌ನ ಶಿಯಾ ಉಗ್ರಗಾಮಿ ಸಂಘಟನೆಗಳನ್ನು ಒಂದೇ ವೇದಿಕೆಗೆ ತಂದು ಇಸ್ರೇಲ್ ಮೇಲೆ ನಾಲ್ಕೂ ದಿಕ್ಕುಗಳಿಂದ ಏಕಕಾಲಕ್ಕೆ ದಾಳಿ ನಡೆಸುವುದು ಟೆಹ್ರಾನ್‌ನ ಮುಖ್ಯ ಯೋಜನೆಯಾಗಿದೆ. ಅಕ್ಟೋಬರ್ 7ರ ದಾಳಿಯ ಮುನ್ಸೂಚನೆ ಇರಾನ್ ಹಾಗೂ ಹೆಜ್ಬುಲ್ಲಾಗೆ ಸಂಪೂರ್ಣವಾಗಿ ಇರಲಿಲ್ಲ ಎಂಬ ವರದಿಗಳಿದ್ದವು. ಆದರೆ, ಈ ಬಾರಿಯ ಯೋಜನೆಯಲ್ಲಿ ಇರಾನ್‌ನ ‘ಕುದ್ಸ್ ಫೋರ್ಸ್’ (Quds Force) ಕಮಾಂಡರ್‌ಗಳು ನೇರವಾಗಿ ಈ ಎಲ್ಲಾ ಸಂಘಟನೆಗಳ ನಾಯಕರೊಂದಿಗೆ ಜಂಟಿ ಸಭೆಗಳನ್ನು ನಡೆಸಿ, ದಾಳಿಯ ಕಾರ್ಯಾಚರಣೆಗೆ ಅಗತ್ಯವಿರುವ ಸಮನ್ವಯತೆಯನ್ನು ಸಾಧಿಸುತ್ತಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಇರಾನ್ ತನ್ನ ಕ್ಷಿಪಣಿಗಳು ಹಾಗೂ ಆತ್ಮಘಾತಿ ಡ್ರೋನ್‌ಗಳ ಉತ್ಪಾದನೆಯನ್ನು ಗಣನೀಯವಾಗಿ ವೇಗಗೊಳಿಸಿದ್ದು, ತನ್ನ ಪ್ರಾಕ್ಸಿ ಪಡೆಗಳಿಗೆ ಅತ್ಯಾಧುನಿಕ ಹಾಗೂ ಸುಧಾರಿತ ಆಯುಧಗಳನ್ನು ಪೂರೈಸುತ್ತಿದೆ. ಇರಾನ್‌ನ ಈ ಸಂಭಾವ್ಯ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಇಸ್ರೇಲ್ ರಕ್ಷಣಾ ಪಡೆಗಳು (IDF) ಮತ್ತು ಮೊಸಾದ್ (Mossad) ಗಡಿ ಭಾಗಗಳಲ್ಲಿ ಕಣ್ಗಾವಲನ್ನು ತೀವ್ರಗೊಳಿಸಿವೆ. ದೇಶದ ವಿರುದ್ಧ ಯಾವುದೇ ರೀತಿಯ ದಾಳಿ ಯತ್ನ ನಡೆದರೆ, ಇರಾನ್ ಬೆಂಬಲಿತ ಪಡೆಗಳಷ್ಟೇ ಅಲ್ಲದೆ ನೇರವಾಗಿ ಇರಾನ್ ಮೇಲೆಯೇ ಕಠಿಣ ತಿರುಗೇಟು ನೀಡಲಾಗುವುದು ಎಂದು ಇಸ್ರೇಲ್ ಬೆದರಿಕೆ ಹಾಕಿದೆ.