ನ್ಯೂಯಾರ್ಕ್: ಬಾಲ್ಯ ಹಾಗೂ ಬಲವಂತದ ವಿವಾಹಗಳ ನಿರ್ಮೂಲನೆಗಾಗಿ ಪ್ರತಿ ವರ್ಷ ನವೆಂಬರ್ 27 ಅನ್ನು 'ಅಂತರರಾಷ್ಟ್ರೀಯ ಬಾಲ್ಯ ವಿವಾಹ ಮುಕ್ತ ದಿನ'ವಾಗಿ ಘೋಷಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯಕ್ಕೆ ಭಾರತ ಸಹ-ಪ್ರಾಯೋಜಕತ್ವ ನೀಡಿದೆ. ಸಿಯೆರಾ ಲಿಯೋನ್ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 193 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ.
ಭಾರತದಲ್ಲಿ 2024ರ ನವೆಂಬರ್ 27 ರಂದು 'ಬಾಲ್ಯ ವಿವಾಹ ಮುಕ್ತ ಭಾರತ' ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. 2026ರ ವೇಳೆಗೆ ಬಾಲ್ಯ ವಿವಾಹ ಪ್ರಮಾಣವನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವುದು ಮತ್ತು 2030ರ ವೇಳೆಗೆ ದೇಶವನ್ನು ಸಂಪೂರ್ಣ ಬಾಲ್ಯ ವಿವಾಹ ಮುಕ್ತಗೊಳಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ. ಭಾರತ ಅಭಿಯಾನ ಆರಂಭಿಸಿದ ದಿನವನ್ನೇ ಈಗ ಜಾಗತಿಕ ದಿನವನ್ನಾಗಿ ಘೋಷಿಸಿರುವುದು ದೇಶದ ಗುರಿಗೆ ಸಿಕ್ಕ ದೊಡ್ಡ ಅಂತರರಾಷ್ಟ್ರೀಯ ಬೆಂಬಲವಾಗಿದೆ.
ಸಿಯೆರಾ ಲಿಯೋನ್‌ನ ಪ್ರಥಮ ಮಹಿಳೆ ಫಾತಿಮಾ ಮಾಡಾ ಬಯೋ ಹಾಗೂ 'ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್' ಸಂಸ್ಥೆಯ ಸಂಸ್ಥಾಪಕ ಭುವನ್ ರಿಭು ಅವರು ಬಾಲ್ಯ ವಿವಾಹವನ್ನು ಕೊನೆಗಾಣಿಸಲು ಜಾಗತಿಕ ದಿನವೊಂದನ್ನು ಮೀಸಲಿಡಬೇಕು ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ್ದರು. ಭಾರತ ಸೇರಿದಂತೆ ಸುಮಾರು 70 ದೇಶಗಳ ಬೆಂಬಲದೊಂದಿಗೆ ಸಿಯೆರಾ ಲಿಯೋನ್ ಈ ನಿರ್ಣಯವನ್ನು ಮಂಡಿಸಿತ್ತು. ನಿರ್ಣಯ ಅಂಗೀಕಾರವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಭುವನ್ ರಿಭು, "ಇಡೀ ವಿಶ್ವವೇ ಬಾಲ್ಯ ವಿವಾಹದ ವಿರುದ್ಧ ನಿಂತಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಮಯ ಬಂದಿದ್ದು, ಜಗತ್ತೇ ಈ ಪಿಡುಗು ಇನ್ನು ಸಾಕು ಎಂದು ಸಾರುತ್ತಿದೆ" ಎಂದು ತಿಳಿಸಿದರು.
ಬಾಲ್ಯ ಮತ್ತು ಬಲವಂತದ ವಿವಾಹಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಮತ್ತು ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಅವಕಾಶಗಳನ್ನು ಕಸಿದುಕೊಳ್ಳುವ ಹಾನಿಕಾರಕ ಪದ್ಧತಿ ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ. 2023 ರಿಂದ 5.5 ಲಕ್ಷಕ್ಕೂ ಅಧಿಕ ಬಾಲ್ಯ ವಿವಾಹಗಳನ್ನು ತಡೆಗಟ್ಟಿರುವ 'ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್' ಸಂಸ್ಥೆಯ ಪ್ರಕಾರ, ಈ ನಿರ್ಣಯದ ಮೂಲಕ ಬಾಲ್ಯ ವಿವಾಹವು ಕೇವಲ ಸಾಮಾಜಿಕ ಪಿಡುಗಲ್ಲ, ಬದಲಿಗೆ ಅದೊಂದು ಅಪರಾಧ ಮತ್ತು ಬಾಲ ಲೈಂಗಿಕ ದೌರ್ಜನ್ಯದ ಮತ್ತೊಂದು ರೂಪ ಎಂಬ ನಿಲುವಿಗೆ ಜಾಗತಿಕ ಮನ್ನಣೆ ದೊರೆತಂತಾಗಿದೆ.
ಸದಸ್ಯ ರಾಷ್ಟ್ರಗಳು ಸಮಗ್ರ ಕಾನೂನುಗಳು, ಬಜೆಟ್ ಯೋಜನೆಗಳು ಮತ್ತು ಸಂಸ್ಥೆಗಳ ಮೂಲಕ ಬಾಲ್ಯ ವಿವಾಹವನ್ನು ಉತ್ತೇಜಿಸುವ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂದು ನಿರ್ಣಯ ಕರೆ ನೀಡಿದೆ. ಜೊತೆಗೆ ಹೆಣ್ಣುಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಹೂಡಿಕೆ ಮಾಡಬೇಕು ಹಾಗೂ ವಿವಾಹಿತ ಬಾಲಕಿಯರು ಮತ್ತೆ ಶಾಲೆಗೆ ಮರಳಲು ಅನುಕೂಲವಾಗುವಂತೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ವಿಶ್ವಸಂಸ್ಥೆ ಶಾಸನಬದ್ಧವಾಗಿ ಸೂಚಿಸಿದೆ.