ಜಕಾರ್ತಾ : ಇಂಡೋನೇಷ್ಯಾದ ಸುಂದಾ ಜಲಸಂಧಿಯಲ್ಲಿರುವ ಜಾವಾ ಮತ್ತು ಸುಮಾತ್ರಾ ದ್ವೀಪಗಳ ನಡುವಿನ ಸಕ್ರಿಯ ಜ್ವಾಲಾಮುಖಿ ದ್ವೀಪವಾದ ಅನಕ್ ಕ್ರಾಕಟೌ ಭಾನುವಾರ ಮುಂಜಾನೆ ಭೀಕರವಾಗಿ ಸ್ಫೋಟಗೊಂಡಿದೆ. ಶನಿವಾರದಿಂದಲೇ ರೌದ್ರಾವತಾರ ತೋರುತ್ತಿದ್ದ ಈ ಜ್ವಾಲಾಮುಖಿಯು ಭಾನುವಾರ ಬೆಳಗಿನ ಜಾವ 3:53 ಕ್ಕೆ ಸುಮಾರು 30 ಸೆಕೆಂಡುಗಳ ಕಾಲ ತೀವ್ರವಾಗಿ ಸ್ಫೋಟಗೊಂಡಿದೆ ಎಂದು ಇಂಡೋನೇಷ್ಯಾದ ಭೂವೈಜ್ಞಾನಿಕ ಇಲಾಖೆ ಖಚಿತಪಡಿಸಿದೆ. ಈ ಸ್ಫೋಟದ ಪರಿಣಾಮವಾಗಿ ಹೊರಹೊಮ್ಮಿದ ಬೃಹತ್ ಬೂದಿಯ ಮೋಡಗಳು ಪಶ್ಚಿಮ ಇಂಡೋನೇಷ್ಯಾದ ಭಾಗಗಳನ್ನು ಆವರಿಸಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರಾಜಧಾನಿ ಜಕಾರ್ತಾದ ಸೂಕರ್ನೊ-ಹತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಜ್ವಾಲಾಮುಖಿಯಿಂದ ಎದ್ದ ದಟ್ಟವಾದ ಬೂದಿಯು ರಾಜಧಾನಿ ಜಕಾರ್ತಾ ಸೇರಿದಂತೆ ಸುಮಾತ್ರಾ ದ್ವೀಪದ ದಕ್ಷಿಣ ತುದಿಯ ಲ್ಯಾಂಪಂಗ್ ಪ್ರಾಂತ್ಯಕ್ಕೂ ಹರಡಿದೆ. ಇದರಿಂದಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ಎಲ್ಲಾ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಪ್ರಯಾಣ ಸಲಹೆಯಲ್ಲಿ ತಿಳಿಸಿದ್ದಾರೆ. ವಿಮಾನ ಸೇವೆಗಳು ದಿಢೀರ್ ರದ್ದಾದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿದ್ದ ನೂರಾರು ಪ್ರಯಾಣಿಕರು ಪರದಾಡುವಂತಾಯಿತು ಹಾಗೂ ತಮ್ಮ ಟಿಕೆಟ್ ದರ ಮರುಪಾವತಿಯನ್ನು ಪಡೆದು ಲಗೇಜ್‌ಗಳೊಂದಿಗೆ ವಾಪಸಾಗಿದ್ದಾರೆ.
ಉಪಗ್ರಹ ಚಿತ್ರಣಗಳ ಆಧಾರದ ಮೇಲೆ ಆಸ್ಟ್ರೇಲಿಯಾದ ಡಾರ್ವಿನ್ ಜ್ವಾಲಾಮುಖಿ ಬೂದಿ ಸಲಹಾ ಕೇಂದ್ರ ಮತ್ತು ಸ್ಥಳೀಯ ಸಂಸ್ಥೆಗಳು ಎರಡು ಪ್ರತ್ಯೇಕ ಬೂದಿ ಮೋಡಗಳನ್ನು ಗುರುತಿಸಿವೆ. ಮೊದಲನೆಯದ್ದು 20 ಸಾವಿರ ಅಡಿ ಎತ್ತರದಲ್ಲಿ ಈಶಾನ್ಯ ಭಾಗಕ್ಕೆ ಚಲಿಸಿ ಜಕಾರ್ತಾ, ಬ್ಯಾಂಟೆನ್ ಹಾಗೂ ಪಶ್ಚಿಮ ಜಾವಾ ಪ್ರದೇಶಗಳನ್ನು ಆವರಿಸಿದ್ದರೆ, ಎರಡನೆಯ ಬೃಹತ್ ಮೋಡವು 50 ಸಾವಿರ ಅಡಿ ಎತ್ತರಕ್ಕೆ ಜಿಗಿದು ವಾಯುವ್ಯ ದಿಕ್ಕಿಗೆ ಚಲಿಸಿ ಬ್ಯಾಂಟೆನ್, ಲ್ಯಾಂಪಂಗ್, ಬೆಂಗ್ಕುಲು ಮತ್ತು ಸುಂದಾ ಜಲಸಂಧಿಯ ಭಾಗಗಳಿಗೆ ಹರಡಿದೆ.
ಜ್ವಾಲಾಮುಖಿ ಕೇಂದ್ರವು ಜನವಸತಿಯಿಂದ 16 ಕಿಲೋಮೀಟರ್‌ಗಿಂತಲೂ ದೂರದಲ್ಲಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಹಾಗಾಗಿ ಸದ್ಯಕ್ಕೆ ಸಾರ್ವಜನಿಕರ ಸ್ಥಳಾಂತರಕ್ಕೆ ಆದೇಶ ನೀಡಿಲ್ಲವಾದರೂ, ಜ್ವಾಲಾಮುಖಿಯ ಕುಳಿಯಿಂದ ಕನಿಷ್ಠ 3 ಕಿಲೋಮೀಟರ್ ಅಂತರ ಕಾಯ್ದುಕೊಳ್ಳುವಂತೆ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ ಸೂಚಿಸಲಾಗಿದೆ. ಇದೇ ಅನಕ್ ಕ್ರಾಕಟೌ 2018 ರಲ್ಲಿ ಸ್ಫೋಟಗೊಂಡು ಭೀಕರ ಸುನಾಮಿ ಸೃಷ್ಟಿಸಿ 430 ಕ್ಕೂ ಹೆಚ್ಚು ಜನರ ಪ್ರಾಣ ಪಡೆದಿತ್ತು ಎಂಬುದು ಗಮನಾರ್ಹ.