ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು 'ಯುದ್ಧ' ಎಂದು ಕರೆಯಲು ಸಾಧ್ಯವಿಲ್ಲ ಎಂಬ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಓವಲ್ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಮೇಲಿನ ದಾಳಿಗಳು ಅನಿಯಮಿತವಾಗಿದ್ದು, ಇದನ್ನು ಪೂರ್ಣಪ್ರಮಾಣದ ಯುದ್ಧ ಎನ್ನುವುದಕ್ಕಿಂತ 'ಸೇನಾ ಸಂಘರ್ಷ' ಎಂದು ಕರೆಯುವುದು ಸೂಕ್ತ. ಇದು ಅಮೆರಿಕಕ್ಕೆ ಅತ್ಯಂತ ಸಣ್ಣ ವಿಷಯವೇ ಹೊರತು ದೊಡ್ಡದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ವೇತಭವನದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಇರಾನ್ ವಿರುದ್ಧದ ಹೋರಾಟವನ್ನು 'ಯುದ್ಧ' ಎಂಬ ಪದದಿಂದ ಉಲ್ಲೇಖಿಸಲು ನಿರಾಕರಿಸಿದ್ದರು. ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಈ ಸಂಘರ್ಷವು ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳ ವೇಳೆಗೆ ಕೊನೆಗೊಳ್ಳಬಹುದು ಎಂದು ಭವಿಷ್ಯ ನುಡಿದ ಅವರು, ಸದ್ಯ ಯಾವುದೇ ಸಕ್ರಿಯ ಗುಂಡಿನ ಚಕಮಕಿಗಳು ನಡೆಯುತ್ತಿಲ್ಲ ಎಂದಿದ್ದರು. ಆದರೆ, ವಾರದ ಆರಂಭದಲ್ಲಿ ಇರಾನ್‌ನ ಮೇಲೆ ಅಮೆರಿಕ ನಡೆಸಿದ ದಾಳಿಗಳಿಗೆ ಪ್ರತೀಕಾರವಾಗಿ ಇರಾನ್, ಅಮೆರಿಕದ ಗಲ್ಫ್ ಮಿತ್ರರಾಷ್ಟ್ರವಾದ ಕುವೈತ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ವ್ಯಾನ್ಸ್ ಈ ಹೇಳಿಕೆ ನೀಡಿದ್ದರು.
ಫೆಬ್ರವರಿ 28 ರಂದು ಆರಂಭವಾದ ಈ ಸಂಘರ್ಷದಲ್ಲಿ ಅಮೆರಿಕ ಮತ್ತು ಇಸ್ರೇಲ್ ಕೇವಲ ವೈಮಾನಿಕ ದಾಳಿಗಳನ್ನು ನಡೆಸಿವೆಯೇ ಹೊರತು, ಇರಾನ್‌ಗೆ ತಮ್ಮ ಸೈನ್ಯವನ್ನು ನಿಯೋಜಿಸಿಲ್ಲ. ಈ ಕಾರಣದಿಂದಾಗಿ ಅಮೆರಿಕದ ಸಾವು-ನೋವುಗಳ ಸಂಖ್ಯೆಯು ಇತ್ತೀಚಿನ ಇತರ ಯುದ್ಧಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಜನವರಿಯಲ್ಲಿ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ವಶಕ್ಕೆ ಪಡೆದು ಮಾದಕವಸ್ತು ಕಳ್ಳಸಾಗಣೆ ಆರೋಪ ವಿಚಾರಣೆಗೆ ನ್ಯೂಯಾರ್ಕ್‌ಗೆ ಕರೆತಂದ ಕಾರ್ಯಾಚರಣೆಯಲ್ಲಿ ಅಮೆರಿಕ ಯಾವುದೇ ಸೈನಿಕರನ್ನು ಕಳೆದುಕೊಳ್ಳಲಿಲ್ಲ ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. ವಿಯೆಟ್ನಾಂ ಯುದ್ಧದಲ್ಲಿ 1,00,000ಕ್ಕೂ ಹೆಚ್ಚು ಹಾಗೂ ಇತರ ಸಂಘರ್ಷಗಳಲ್ಲಿ ಹತ್ತಾರು ಸಾವಿರ ಮಂದಿಯನ್ನು ಅಮೆರಿಕ ಕಳೆದುಕೊಂಡಿತ್ತು ಎಂದು ಹೋಲಿಕೆ ಮಾಡಿದ ಟ್ರಂಪ್, ಇರಾನ್ ಸಂಘರ್ಷದ ತೀವ್ರತೆ ತೀರಾ ಕಡಿಮೆಯದ್ದು ಎಂದು ಪ್ರತಿಪಾದಿಸಿದ್ದಾರೆ.