ನೇಪಾಳ : ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹವು ಸಾವಿರಾರು ಕುಟುಂಬಗಳ ಬದುಕನ್ನು ಬೀದಿಗೆ ತಳ್ಳಿದೆ. ಆಗಸ್ಟ್ 26 ರಂದು ಸಂಭವಿಸಿದ ಈ ಜಲಪ್ರಳಯದಲ್ಲಿ 1,290ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 5,000ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಈ ದುರಂತದ ನಡುವೆ ನೇಪಾಳ-ಟಿಬೆಟ್ ಗಡಿಯ ರಸುವಾ ಜಿಲ್ಲೆಯ ತಿರು ಗ್ರಾಮದ ಕಮೇಶ್ ಸಿಂಗ್ ತಮಾಂಗ್ ಎಂಬವರ ಕಥೆ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ. ದುರಂತದಲ್ಲಿ ತಮ್ಮ ಕುಟುಂಬದ 17 ಸದಸ್ಯರನ್ನು ಕಳೆದುಕೊಂಡಿರುವ ಕಮೇಶ್, ಮೃತದೇಹಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ನುವಾಕೋಟ್ ಜಿಲ್ಲೆಯ ಧುಂಗೆ ಪಟ್ಟಣದ ತ್ರಿಶೂಲಿ ನದಿ ದಡದಲ್ಲಿ ಸಾಂಕೇತಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ನಲವತ್ತರ ಹರೆಯದ ಬೌದ್ಧ ಧರ್ಮದ ಕಮೇಶ್ ಸಿಂಗ್ ತಮಾಂಗ್, ಕೃಷಿ ಕೆಲಸಕ್ಕಾಗಿ ಪರ್ವತ ಪ್ರದೇಶಕ್ಕೆ ತೆರಳಿದ್ದಾಗ ಈ ಪ್ರವಾಹ ನುಗ್ಗಿದೆ. ಎತ್ತರದ ಪ್ರದೇಶದಲ್ಲಿದ್ದ ಕಾರಣ ಕಮೇಶ್ ಬದುಕುಳಿದರೂ, ಗ್ರಾಮದಲ್ಲಿದ್ದ ಅವರ ಸಹೋದರರು, ಸಹೋದರಿಯರು, ಮಕ್ಕಳು, ಅಳಿಯಂದಿರು ಹಾಗೂ ಸೊಸೆಯಂದಿರು ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ಸತತ ಒಂಬತ್ತು ದಿನಗಳ ಕಾಲ ತ್ರಿಶೂಲಿ ನದಿಯ ಉದ್ದಕ್ಕೂ ಹುಡುಕಾಡಿದರೂ ಕುಟುಂಬದ ಯಾರೊಬ್ಬರ ಮೃತದೇಹವೂ ಪತ್ತೆಯಾಗಲಿಲ್ಲ. ಕೊನೆಗೆ ಸಮುದಾಯದ ಹಿರಿಯರ ಸಲಹೆಯಂತೆ, ನಾಪತ್ತೆಯಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ ಸಾಂಕೇತಿಕ ಚಿತೆಯನ್ನು ನಿರ್ಮಿಸಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗಿದೆ.
ಚಿತೆಯ ಬೆಂಕಿ ಉರಿಯುತ್ತಿದ್ದಾಗ ಕಮೇಶ್ ಕಣ್ಣೀರಿನಿಂದಲೇ ತಮ್ಮ ಪ್ರೀತಿಪಾತ್ರರಿಗೆ ನೀರು, ತಂಪು ಪಾನೀಯಗಳು ಹಾಗೂ ಚಾಕೊಲೇಟ್ಗಳನ್ನು ಅರ್ಪಿಸಿದರು. ವಿಶೇಷವಾಗಿ ಪ್ರವಾಹಕ್ಕೆ ಬಲಿಯಾದ ತಮ್ಮ ಕುಟುಂಬದ ಚಿಕ್ಕ ಮಕ್ಕಳಿಗೆ ಇಷ್ಟವಾಗುತ್ತಿದ್ದ ಬಿಸ್ಕತ್, ಆಲೂಗಡ್ಡೆ ಚಿಪ್ಸ್ ಹಾಗೂ ಕ್ಯಾಂಡಿಗಳನ್ನು ಖರೀದಿಸಿ ಬೆಂಕಿಗೆ ಹಾಕಿದರು. "ಹಿಂದೆ ಈ ತಿಂಡಿಗಳನ್ನು ತಿನ್ನಬೇಡಿ ಎಂದು ಮಕ್ಕಳನ್ನು ಗದರಿಸುತ್ತಿದ್ದೆ. ಆದರೆ ಇಂದು ಅವರ ನೆನಪಿನಲ್ಲಿ ಅವರಿಗಿಷ್ಟವಾದ ವಸ್ತುಗಳನ್ನೇ ಅರ್ಪಿಸುವ ಪರಿಸ್ಥಿತಿ ಬಂದಿದೆ" ಎಂದು ಕಮೇಶ್ ಅಳಲು ತೋಡಿಕೊಂಡಿದ್ದಾರೆ. ಪ್ರವಾಹದಿಂದ ಈ ಪ್ರದೇಶದ ಸಾಮಾನ್ಯ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಆಪ್ತರ ಮೃತದೇಹಗಳೂ ಸಿಗದೆ ದುಃಖದಲ್ಲೇ ಸಾಂಕೇತಿಕ ಅಂತ್ಯಕ್ರಿಯೆ ನೆರವೇರಿಸುತ್ತಿರುವ ದೃಶ್ಯಗಳು ಇಲ್ಲಿನ ಪ್ರವಾಹದ ಭೀಕರತೆಗೆ ಕನ್ನಡಿ ಹಿಡಿದಿವೆ.