image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ಭೀಕರ ನೌಕಾ ಸಮರ

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ಭೀಕರ ನೌಕಾ ಸಮರ

ಇರಾನ್ : ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಈಗ ಪೂರ್ಣ ಪ್ರಮಾಣದ ನೌಕಾ ಸಮರವಾಗಿ ಮಾರ್ಪಟ್ಟಿದೆ. ಇರಾನ್‌ಗೆ ಸೇರಿದ ಮೂರು ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಅಮೆರಿಕದ ಪಡೆಗಳು ಹೊಡೆದುರುಳಿಸಿದ ಕೆಲವೇ ಗಂಟೆಗಳಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (ಐಆರ್‌ಜಿಆರ್‌) ಭಾರಿ ಪ್ರತೀಕಾರ ತೀರಿಸಿಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದೊಂದಿಗೆ ಸಂಪರ್ಕ ಹೊಂದಿದ್ದ ಆರು ವಾಣಿಜ್ಯ ಹಡಗುಗಳು ಹಾಗೂ ಯುಎಸ್ ವಿಮಾನವಾಹಕ ಯುದ್ಧನೌಕೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಸಶಸ್ತ್ರ ಪಡೆ ಘೋಷಿಸಿದೆ.

ಹಾರ್ಮುಜ್ ಜಲಸಂಧಿಯ 'ಅನಧಿಕೃತ ಮಾರ್ಗ'ದಲ್ಲಿ ಸಂಚರಿಸುತ್ತಿದ್ದ ಮೂರು ತೈಲ ಟ್ಯಾಂಕರ್‌ಗಳು ಹಾಗೂ ಬೇರೆಡೆ ಅಮೆರಿಕಕ್ಕೆ ಸೇರಿದ ಇತರ ಮೂರು ಹಡಗುಗಳನ್ನು ಗುರಿಯಾಗಿಸಿ ಕ್ಷಿಪಣಿ ಪ್ರಹಾರ ನಡೆಸಲಾಗಿದೆ ಎಂದು ಐಆರ್‌ಜಿಆರ್ ಹೇಳಿದೆ. ಇರಾನ್ ಕರಾವಳಿಗೆ ನೌಕಾ ದಿಗ್ಬಂಧನ ವಿಧಿಸಲು ಯತ್ನಿಸುತ್ತಿದ್ದ ಅಮೆರಿಕದ ವಿಮಾನವಾಹಕ ನೌಕೆ ಮತ್ತು ವಿಧ್ವಂಸಕ ನೌಕೆಯ ಮೇಲೆಯೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಹಾನಿಗೊಳಗಾದ ಆ ನೌಕೆಗಳು ಯುದ್ಧ ವಲಯದಿಂದ ಪಲಾಯನ ಮಾಡಿವೆ ಎಂದು ಇರಾನ್ ಸರ್ಕಾರಿ ವಾಹಿನಿ ಐಆರ್‌ಐಬಿ ವರದಿ ಮಾಡಿದೆ. ಇದರೊಂದಿಗೆ, ಕೊಲ್ಲಿ ಪ್ರದೇಶದಲ್ಲಿ ಸಂಚರಿಸುವ ಇತರ ದೇಶಗಳ ವಾಣಿಜ್ಯ ಹಡಗುಗಳು ಅಮೆರಿಕದ ಬೆಂಬಲಕ್ಕೆ ನಿಲ್ಲದೆ, ಇರಾನ್ ಸೂಚಿಸಿದ ಮಾರ್ಗಗಳಲ್ಲೇ ಸಾಗಬೇಕು, ಇಲ್ಲದಿದ್ದರೆ ಅಂತಹ ಹಡಗುಗಳನ್ನೂ ಗುರಿಯಾಗಿಸಲಾಗುವುದು ಎಂದು ಐಆರ್‌ಜಿಆರ್ ಕಠಿಣ ಎಚ್ಚರಿಕೆ ರವಾನಿಸಿದೆ.

ಇನ್ನೊಂದೆಡೆ, ಅಮೆರಿಕ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ಖಾರ್ಗ್ ದ್ವೀಪ ಹಾಗೂ ಒಮಾನ್ ಕೊಲ್ಲಿ ಬಳಿ ಕಾರ್ಯಾಚರಣೆ ನಡೆಸಿ ಇರಾನ್‌ನ ಮೂರು ತೈಲ ಟ್ಯಾಂಕರ್‌ಗಳನ್ನು ಸಂಪೂರ್ಣವಾಗಿ ನಾಶಪಡಿಸಿರುವುದಾಗಿ ದೃಢಪಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ 'ಎಕ್ಸ್' ಜಾಲತಾಣದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದು, 'ಲೆಕ್ಕಾಚಾರ ತೀರಾ ಸರಳ, ಇರಾನ್ ಅಮೆರಿಕ ನೌಕಾಪಡೆಯ ಮೇಲೆ ಗುಂಡು ಹಾರಿಸಿದರೆ, ನಾವು ಅವರ ಎಲ್ಲಾ ತೈಲ ಟ್ಯಾಂಕರ್‌ಗಳನ್ನು ಮುಳುಗಿಸುತ್ತೇವೆ' ಎಂದು ಗುಡುಗಿದ್ದಾರೆ. ಅಮೆರಿಕ ನೌಕಾಪಡೆಗೆ ಅಡ್ಡಿಪಡಿಸಿದರೆ ಇರಾನ್ ಕಲ್ಪನೆಗೂ ಮೀರಿದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸೆಂಟ್ಕಾಮ್ ಕಮಾಂಡರ್ ಬ್ರಾಡ್ ಕೂಪರ್ ಕೂಡ ಎಚ್ಚರಿಸಿದ್ದಾರೆ.

ಪೂರ್ವದ ಶಾಂತಿ ಒಪ್ಪಂದಗಳು ಮತ್ತು ಕದನ ವಿರಾಮ ಸಂಪೂರ್ಣವಾಗಿ ಮುರಿದುಬಿದ್ದ ನಂತರ, ಈ ಸಂಘರ್ಷವು ಕೇವಲ ಸೇನಾ ನೆಲೆಗಳಿಗೆ ಸೀಮಿತವಾಗದೆ ವಾಣಿಜ್ಯ ಹಡಗುಗಳು ಹಾಗೂ ಆರ್ಥಿಕ ಮಾರ್ಗಗಳನ್ನು ಧ್ವಂಸಗೊಳಿಸುವ ಆರ್ಥಿಕ ಸಮರವಾಗಿ ರೂಪಾಂತರಗೊಂಡಿದೆ. ಜಾಗತಿಕವಾಗಿ ಸಮುದ್ರ ಮಾರ್ಗದ ಮೂಲಕ ಸಾಗಣೆಯಾಗುವ ಒಟ್ಟು ಕಚ್ಚಾ ತೈಲದ ಶೇಕಡಾ 20ರಷ್ಟು ಭಾಗವು ಕೇವಲ 39 ಕಿ.ಮೀ ಅಗಲವಿರುವ ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುವುದರಿಂದ, ಇಲ್ಲಿ ಯುದ್ಧ ತೀವ್ರಗೊಂಡರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುವ ಭೀತಿ ಎದುರಾಗಿದೆ.

Category
ಕರಾವಳಿ ತರಂಗಿಣಿ