ವಿಯೆಟ್ನಾಂ : ವಿಯೆಟ್ನಾಂನಲ್ಲಿ ಅತ್ಯಂತ ವರ್ಣರಂಜಿತವಾಗಿ ಜರುಗಿದ 73ನೇ ವಿಶ್ವ ಸುಂದರಿ (ಮಿಸ್ ವರ್ಲ್ಡ್ 2026) ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಡೊಮಿನಿಕನ್ ರಿಪಬ್ಲಿಕ್ನ ಜೊಹೈರಿ ಮೋಲಾ ನೂತನ ವಿಶ್ವ ಸುಂದರಿಯಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಬಾರಿಯ ವಿಶ್ವ ಸುಂದರಿ, ಥಾಯ್ಲೆಂಡ್ನ ಓಪಲ್ ಸುಚಾತಾ ಚುವಾಂಗ್ಶ್ರೀ ಅವರು ಜೊಹೈರಿ ಮೋಲಾಗೆ ಕಿರೀಟ ಧಾರಣೆ ಮಾಡಿದರು. ಈ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪೇನ್ನ ಎಲಿಸಬೆತ್ ರೇನ್ಸ್ ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಮಲೇಷ್ಯಾದ ತಾನುಸಿಯಾ ಚೆಟ್ಟಿ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.
ವಿಶ್ವದ ವಿವಿಧ ವಲಯಗಳನ್ನು ಪ್ರತಿನಿಧಿಸಿ ಅಂತಿಮ ಟಾಪ್ 6 ಫೈನಲಿಸ್ಟ್ ಹಂತಕ್ಕೇರಿದ ಸ್ಪರ್ಧಿಗಳಲ್ಲಿ ಅಮೆರಿಕ ಹಾಗೂ ಕೆರಿಬಿಯನ್ ವಲಯದ ಜೊಹೈರಿ ಮೋಲಾ ವಿಜೇತರಾದರೆ, ಯುರೋಪ್ನ ಎಲಿಸಬೆತ್ ರೇನ್ಸ್ ಮೊದಲ ರನ್ನರ್ ಅಪ್ ಮತ್ತು 'ಬ್ಯೂಟಿ ವಿತ್ ಎ ಪರ್ಪಸ್' ವಿಭಾಗದಿಂದ ಮಲೇಷ್ಯಾದ ತಾನುಸಿಯಾ ಚೆಟ್ಟಿ ದ್ವಿತೀಯ ರನ್ನರ್ ಅಪ್ ಆದರು. ಪೀಪಲ್ಸ್ ಚಾಯ್ಸ್ ವಿಭಾಗದಿಂದ ಎರಿಟ್ರಿಯಾದ ಸ್ನಿಟ್ ಹಬ್ತೆಬ್, ಏಷ್ಯಾ & ಓಷಿಯಾನಿಯಾ ವಲಯದಿಂದ ವಿಯೆಟ್ನಾಂನ ಲೆ ನ್ಗುಯೆನ್ ಬಾವೊ ನ್ಗೊಕ್ ಹಾಗೂ ಆಫ್ರಿಕಾ ವಲಯದಿಂದ ದಕ್ಷಿಣ ಆಫ್ರಿಕಾದ ರೊಮಾಂಡಾ ಹೊಂಬಿರ್ ಅಂತಿಮ ಆರು ಫೈನಲಿಸ್ಟ್ಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದರು.
ನೂತನ ವಿಶ್ವ ಸುಂದರಿ ಜೊಹೈರಿ ಮೋಲಾ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಸಾಹಿತ್ಯ ಮತ್ತು ಸಮಾಜ ವಿಜ್ಞಾನ ಬೋಧಿಸುತ್ತಿದ್ದಾರೆ. ಯೂನಿವಿಷನ್ ನ್ಯೂಯಾರ್ಕ್ನಲ್ಲಿ ವರದಿಗಾರ್ತಿಯಾಗಿ ಡೊಮಿನಿಕನ್ ಸಂಸ್ಕೃತಿ ಹಾಗೂ ಸಾಮಾಜಿಕ ವಿಷಯಗಳ ಕುರಿತು ಕಾರ್ಯಕ್ರಮ ನಡೆಸಿಕೊಡುತ್ತಿರುವ ಇವರು, ವೃತ್ತಿಪರ ರೂಪದರ್ಶಿಯೂ ಹೌದು. ಜೊತೆಗೆ 'ಗೋಯಾ ಗಿವ್ಸ್' ಸಂಸ್ಥೆಯ ರಾಯಭಾರಿಯಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಕಿತಾ ಪೋರ್ವಾಲ್ ಅವರ ಪಯಣ ಟಾಪ್ 40 ಹಂತಕ್ಕೆ ಮುಕ್ತಾಯಗೊಂಡಿದೆ. ಅಂತಿಮ ಸುತ್ತುಗಳಿಗೆ ಪ್ರವೇಶಿಸಲು ಸಾಧ್ಯವಾಗದಿದ್ದರೂ, ಜಾಗತಿಕ ಮಟ್ಟದ ಅತ್ಯುನ್ನತ ವೇದಿಕೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಭಾರತದ ಛಾಪು ಮೂಡಿಸುವಲ್ಲಿ ನಿಕಿತಾ ಯಶಸ್ವಿಯಾದರು.