ಕೀನ್ಯ : ಕೀನ್ಯಾದ ಕಜಿಯಾಡೋ ಪ್ರಾಂತ್ಯದಲ್ಲಿ ನೂರು ವರ್ಷಗಳ ಸುದೀರ್ಘ ಗಣಿಗಾರಿಕೆ ಒಪ್ಪಂದವನ್ನು ಹೊಂದಿದ್ದರೂ, ಭಾರತೀಯ ಮೂಲದ ಪ್ರಸಿದ್ಧ 'ಟಾಟಾ ಕೆಮಿಕಲ್ಸ್' ಸಂಸ್ಥೆಗೆ ತತ್‌ಕ್ಷಣವೇ ದೇಶ ತೊರೆಯುವಂತೆ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೋ ಖಡಕ್ ಆದೇಶ ನೀಡಿದ್ದಾರೆ. ದಶಕಗಳಿಂದ ದೇಶದ ನೈಸರ್ಗಿಕ ಸಂಪನ್ಮೂಲವಾದ 'ಸೋಡಾ ಆಶ್' (Sodium Carbonate) ಅನ್ನು ಉದ್ಯಮ ಮಟ್ಟದಲ್ಲಿ ಹೊರತೆಗೆದು ವಿದೇಶಗಳಿಗೆ ರಫ್ತು ಮಾಡುತ್ತಿರುವ ಟಾಟಾ ಸಂಸ್ಥೆಯು, ಸ್ಥಳೀಯವಾಗಿ ಯಾವುದೇ ದೊಡ್ಡ ಮಟ್ಟದ ಕೈಗಾರಿಕೆ ಅಥವಾ ಆರ್ಥಿಕ ನೆರವನ್ನು ಒದಗಿಸಿಲ್ಲ ಎಂದು ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಜಿಯಾಡೋ ಪ್ರಾಂತ್ಯದಲ್ಲಿ ಇಷ್ಟೊಂದು ದೀರ್ಘಾವಧಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ, ಟಾಟಾ ಸಂಸ್ಥೆಯು ಗ್ಲಾಸ್ ಉತ್ಪಾದನೆ ಅಥವಾ ರಾಸಾಯನಿಕ ಸಂಸ್ಕರಣೆಯಂತಹ ಪ್ರಮುಖ ಕಾರ್ಖಾನೆಗಳನ್ನು ಸ್ಥಾಪಿಸಿಲ್ಲ. ಕೇವಲ ಕಚ್ಚಾ ಸಂಪನ್ಮೂಲವನ್ನು ಹೊರತೆಗೆದು ರಫ್ತು ಮಾಡುವ ಕೆಲಸಕ್ಕೆ ಸೀಮಿತವಾಗಿ ಆರ್ಥಿಕ ಲಾಭ ಗಳಿಸುತ್ತಿದೆ ಹೊರತು ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದು ಆರೋಪಿಸಲಾಗಿದೆ. ಕಜಿಯಾಡೋ ಪ್ರಾಂತ್ಯದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಲಿಯಂ ರುಟೋ, "ಟಾಟಾ ಸಂಸ್ಥೆಗೆ ಲಾಭ ಒದಗಿಸಿಕೊಡಲು ನಾವು ಇತರರ ಗುಲಾಮರೇ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ದೇಶದ ಸಂಪನ್ಮೂಲಗಳು ಕೇವಲ ವಿದೇಶಿ ಕಂಪೆನಿಗಳ ಲಾಭಕ್ಕೆ ಬಳಕೆಯಾಗಬಾರದು, ಬದಲಿಗೆ ಸ್ಥಳೀಯ ಮೂಲಸೌಕರ್ಯ ಹಾಗೂ ಆರ್ಥಿಕ ಪ್ರಗತಿಗೆ ಪೂರಕವಾಗಿರಬೇಕು ಎಂಬುದು ಕೀನ್ಯಾ ಸರ್ಕಾರದ ಪ್ರತಿಪಾದನೆಯಾಗಿದೆ. ಹೀಗಾಗಿ ಟಾಟಾ ಸಂಸ್ಥೆಯ ಗಣಿಗಾರಿಕೆ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದ್ದು, ಕಜಿಯಾಡೋದಲ್ಲೇ ಬೃಹತ್ ಗ್ಲಾಸ್ ಮತ್ತು ರಾಸಾಯನಿಕ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಸಿದ್ಧರಿರುವ ಹೊಸ ಹೂಡಿಕೆದಾರರನ್ನು ಕರೆತರಲು ಸರ್ಕಾರ ಸನ್ನದ್ಧವಾಗಿದೆ.
ಮತ್ತೊಂದೆಡೆ, ಈ ನಿರ್ದೇಶನಗಳ ಕುರಿತು ಪ್ರತಿಕ್ರಿಯಿಸಿರುವ ಟಾಟಾ ಕೆಮಿಕಲ್ಸ್ ಸಂಸ್ಥೆಯು, ತಾವು ಕೀನ್ಯಾದ ಕಾನೂನು ನಿಯಮಾವಳಿಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದು, ಸರ್ಕಾರ ಕೇಳಿರುವ ಎಲ್ಲಾ ವರದಿ ಮತ್ತು ವಿವರಣೆಗಳನ್ನು ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಸೂಕ್ತ ಕಾನೂನಾತ್ಮಕ ಮತ್ತು ನಿಯಂತ್ರಣ ಸಂಸ್ಥೆಗಳ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ಬದ್ಧವಾಗಿರುವುದಾಗಿ ಹಾಗೂ ಸ್ಥಳೀಯ ಸಮುದಾಯದ ಹಿತರಕ್ಷಣೆಗೆ ನಿರಂತರವಾಗಿ ಶ್ರಮಿಸುವುದಾಗಿ ಕಂಪೆನಿ ತಿಳಿಸಿದೆ.