ನೇಪಾಳ : ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹಕ್ಕೆ ವಿಶ್ವದ ಅತಿ ಹೆಚ್ಚು ಕೈಗಾರಿಕಾ ಹಸಿರುಮನೆ ಅನಿಲ ಹೊರಸೂಸುವ ಪ್ರಮುಖ ದೇಶಗಳಾದ ಚೀನಾ, ಅಮೆರಿಕ ಹಾಗೂ ಭಾರತವೇ ನೇರ ಹೊಣೆ ಎಂದು ನೇಪಾಳ ಸರ್ಕಾರ ಬಹಿರಂಗವಾಗಿ ಆರೋಪಿಸಿದೆ. ಜಾಗತಿಕ ಹವಾಮಾನ ಬದಲಾವಣೆಗೆ ನೇಪಾಳದ ಕೊಡುಗೆ ಅತ್ಯಲ್ಪವಾಗಿದ್ದರೂ, ಅದರ ಭೀಕರ ಪರಿಣಾಮವನ್ನು ತಾವು ಅನುಭವಿಸುತ್ತಿರುವುದಾಗಿ ವಿದೇಶಾಂಗ ಸಚಿವ ಶಿಸಿರ್ ಖನಾಲ್ ಹೇಳಿದ್ದಾರೆ. ಮಾನವೀಯ ನೆರವಿನ ಜೊತೆಗೆ ನೈತಿಕ ಹಾಗೂ ಕಾನೂನುಬದ್ಧ ಹವಾಮಾನ ಪರಿಹಾರ (ಕ್ಲೈಮೇಟ್ ಕಾಂಪನ್ಸೇಷನ್) ಮತ್ತು ನ್ಯಾಯ ಒದಗಿಸುವಂತೆ ಒತ್ತಾಯಿಸಿರುವ ಅವರು, ಈ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಔಪಚಾರಿಕ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ.
ದೇಶದ 8 ಜಿಲ್ಲೆಗಳಲ್ಲಿ ಸಂಭವಿಸಿದ ಈ ಪ್ರಕೃತಿ ವಿಕೋಪದಲ್ಲಿ ಮೃತರ ಸಂಖ್ಯೆ ಈಗಾಗಲೇ 1,000ದ ಗಡಿ ದಾಟಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 21,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕೆಸರಿನಲ್ಲಿ ಹೂತುಹೋಗಿರುವ ಶವಗಳ ಪತ್ತೆ ಕಾರ್ಯ ಮುಂದುವರಿದಿದೆ. ಇದುವರೆಗೆ 12,000 ಜನರನ್ನು ರಕ್ಷಿಸಲಾಗಿದ್ದು, ಇನ್ನು 4,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ ಚಿತ್ವಾನ್‌ನಲ್ಲಿ 321, ನವಾಲ್‌ಪರಸಿ ಪೂರ್ವದಲ್ಲಿ 216, ನವಾಲ್‌ಪರಸಿ ಪಶ್ಚಿಮದಲ್ಲಿ 170, ನುವಾಕೋಟ್‌ನಲ್ಲಿ 95, ಗೋಖಾದಲ್ಲಿ 65, ಧಾಡಿಂಗ್‌ನಲ್ಲಿ 55, ತನಹುನ್‌ನಲ್ಲಿ 38 ಮತ್ತು ರಸುವಾದಲ್ಲಿ 27 ಮೃತದೇಹಗಳು ಪತ್ತೆಯಾಗಿವೆ. ನುವಾಕೋಟ್ ಹಾಗೂ ರಸುವಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಅಪಾಯದ ಹಂತ ತಲುಪಿದ್ದು, ಮತ್ತೊಂದು ಪ್ರವಾಹದ ಭೀತಿಯಿಂದಾಗಿ ಜನರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಪ್ರವಾಹದ ವಿಧ್ವಂಸದ ನಡುವೆಯೂ ತ್ರಿಶೂಲಿಯಲ್ಲಿ ಸಂಭವಿಸಿದ ಪವಾಡಸದೃಶ ಘಟನೆಯೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗಸ್ಟ್ 26ರಂದು ಪ್ರವಾಹ ಬಂದಾಗ ಸುತ್ತಮುತ್ತಲಿನ ಮನೆಗಳು, ಸೇತುವೆಗಳು ಕೊಚ್ಚಿಹೋದರೂ, ಪ್ರಕಾಶ್ ಮತ್ತು ಲಕ್ಷ್ಮೀ ಪಾಂಡೆ ಅವರ 40 ವರ್ಷ ಹಳೆಯ 4 ಮಹಡಿಯ ಮನೆ ಕೊಂಚವೂ ಅಲುಗದೆ ನಿಂತಿದೆ. ನದಿ ಸಮೀಪದಲ್ಲಿದ್ದ ಕಾರಣ ರಸ್ತೆಗೆ ಬಳಸುವ ಸಾಮಗ್ರಿಗಳಿಂದ 3 ಪದರಗಳ ಬಲವಾದ ಅಡಿಪಾಯ ಹಾಕಿ ನಿರ್ಮಿಸಿದ್ದ ಈ ಮನೆಯ 4ನೇ ಮಹಡಿ ಮತ್ತು ಛಾವಣಿ ಏರಿದ ಕುಟುಂಬಸ್ಥರು ಪ್ರಾಣ ಉಳಿಸಿಕೊಂಡಿದ್ದಾರೆ. ಪ್ರವಾಹದ ಜಲರಾಶಿ ಸುತ್ತವರಿದಿದ್ದ ಆ ಭೀಕರ ಕ್ಷಣದಲ್ಲಿ ಮನೆಯೊಡತಿ ಲಕ್ಷ್ಮೀ ಪಾಂಡೆ ಅವರು ಶಿವನನ್ನು ಸ್ಮರಿಸುತ್ತಾ ಹನುಮಾನ್ ಚಾಲೀಸಾ ಪಠಿಸಿ ಪವಾಡಸದೃಶವಾಗಿ ಬದುಕಿ ಬಂದಿರುವುದಾಗಿ ಭಾವುಕರಾಗಿ ಹಂಚಿಕೊಂಡಿದ್ದಾರೆ.