image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪ್ರಧಾನಿ ಮೋದಿಗೆ ಉಜ್ಬೇಕಿಸ್ತಾನದ ಅತ್ಯುನ್ನತ 'ಆರ್ಡರ್ ಆಫ್ ಒಲಿ ದರಜಾಲಿ ದಸ್ತ್ಲಿಕ್' ಪ್ರಶಸ್ತಿ ಪ್ರದಾನ

ಪ್ರಧಾನಿ ಮೋದಿಗೆ ಉಜ್ಬೇಕಿಸ್ತಾನದ ಅತ್ಯುನ್ನತ 'ಆರ್ಡರ್ ಆಫ್ ಒಲಿ ದರಜಾಲಿ ದಸ್ತ್ಲಿಕ್' ಪ್ರಶಸ್ತಿ ಪ್ರದಾನ

ಉಜ್ಬೇಕಿಸ್ತಾನ್ : ಉಜ್ಬೇಕಿಸ್ತಾನ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರದ ಅತ್ಯುನ್ನತ ಗೌರವವಾದ 'ಆರ್ಡರ್ ಆಫ್ ಒಲಿ ದರಜಾಲಿ ದಸ್ತ್ಲಿಕ್' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತಾಷ್ಕೆಂಟ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ಹಾಗೂ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಮಹತ್ತರ ಕೊಡುಗೆಯನ್ನು ಶ್ಲಾಘಿಸಿ ಉಜ್ಬೇಕಿಸ್ತಾನ್ ಸರ್ಕಾರ ಈ ಅತ್ಯುನ್ನತ ಗೌರವವನ್ನು ನೀಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಸನ್ಮಾನವನ್ನು ಭಾರತದ 140 ಕೋಟಿ ಜನತೆಗೆ ಹಾಗೂ ಉಭಯ ದೇಶಗಳ ನಡುವಿನ ಶತಮಾನಗಳ ಹಳೆಯ ಸ್ನೇಹ ಮತ್ತು ಪರಂಪರೆಗೆ ಧನ್ಯವಾದಗಳೊಂದಿಗೆ ಸಮರ್ಪಿಸಿದರು. ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರನ್ನು 'ಉಜ್ಬೇಕಿಸ್ತಾನದ ಆರ್ಥಿಕ ಕ್ರಾಂತಿಯ ಪಿತಾಮಹ' ಎಂದು ಬಣ್ಣಿಸಿದ ಅವರು, ಅಧ್ಯಕ್ಷರ ನಾಯಕತ್ವದಲ್ಲಿ ದೇಶವು ಅಭಿವೃದ್ಧಿಯ ಹೊಸ ಎತ್ತರಕ್ಕೇರಿದೆ ಎಂದರು.

ಉಭಯ ರಾಷ್ಟ್ರಗಳ ಸಂಬಂಧ ಇಂದು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಹೊಸ ಮಟ್ಟಕ್ಕೆ ಏರಿದ್ದು, ಈ ಗೌರವವು ತಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ತಿಳಿಸಿದರು. ಉಜ್ಬೇಕಿಸ್ತಾನದ ಈ ಗೌರವದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ 36ನೇ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಂತಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ಹೆಚ್ಚು ಜಾಗತಿಕ ಗೌರವಗಳಿಗೆ ಭಾಜನರಾದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

Category
ಕರಾವಳಿ ತರಂಗಿಣಿ