image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ನೇಪಾಳ ಪ್ರವಾಹ: ಸಮಯಪ್ರಜ್ಞೆಯಿಂದ 1,643 ವಿದ್ಯಾರ್ಥಿಗಳ ಜೀವ ಉಳಿಸಿದ ಶಿಕ್ಷಕ!

ನೇಪಾಳ ಪ್ರವಾಹ: ಸಮಯಪ್ರಜ್ಞೆಯಿಂದ 1,643 ವಿದ್ಯಾರ್ಥಿಗಳ ಜೀವ ಉಳಿಸಿದ ಶಿಕ್ಷಕ!

ನೇಪಾಳ : ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ಕಣವೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಮೂರು ಅಂತಸ್ತಿನ ಶಾಲಾ ಕಟ್ಟಡವೊಂದು ಧರಾಶಾಹಿಯಾಗಿದ್ದರೂ, ಶಿಕ್ಷಕರೊಬ್ಬರ ಸಮಯಪ್ರಜ್ಞೆಯಿಂದ 1,643 ವಿದ್ಯಾರ್ಥಿಗಳು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 47 ವರ್ಷದ ಇಂಗ್ಲಿಷ್ ಶಿಕ್ಷಕ ಹಾಗೂ ಶಾಲೆಯ ಪ್ರಾಂಶುಪಾಲ ರಾಜೇಂದ್ರ ದವಾಡಿ ತಮ್ಮ ದಿಟ್ಟ ನಿರ್ಧಾರದ ಮೂಲಕ ನೈಜ ನಾಯಕನಾಗಿ ಹೊರಹೊಮ್ಮಿದ್ದಾರೆ.

ಘಟನೆಯ ದಿನ ಬೆಳಿಗ್ಗೆ 9:20ರ ಸುಮಾರಿಗೆ ರಾಜೇಂದ್ರ ದವಾಡಿ ಅವರಿಗೆ ತಮ್ಮ ಸ್ನೇಹಿತನೊಬ್ಬ ಕರೆ ಮಾಡಿ, ನದಿ ತೀರದ ಗ್ರಾಮಗಳು ಕೊಚ್ಚಿ ಹೋಗುತ್ತಿದ್ದು ತಕ್ಷಣವೇ ಜಾಗರೂಕರಾಗುವಂತೆ ಸೂಚಿಸಿದ್ದ. ಶಾಲೆಯು ತ್ರಿಶೂಲಿ ನದಿಯಿಂದ 60 ಮೀಟರ್ ಎತ್ತರದಲ್ಲಿ ಹಾಗೂ ಕಾಂಕ್ರೀಟ್‌ನಿಂದ ಕಟ್ಟಿದ ಗಟ್ಟಿಮುಟ್ಟಾದ ಕಟ್ಟಡವಾಗಿದ್ದರಿಂದ ಆರಂಭದಲ್ಲಿ ಅಪಾಯವಿರಲಾರದು ಎಂದು ಭಾವಿಸಲಾಗಿತ್ತು. ಆದರೆ, ಕೆಲವೇ ನಿಮಿಷಗಳಲ್ಲಿ ಶಾಲೆಯತ್ತ ಓಡೋಡಿ ಬಂದ ಪೋಷಕರೊಬ್ಬರು ಪ್ರವಾಹದ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರುತ್ತಿರುವುದಾಗಿ ಮತ್ತು ಪರಿಸ್ಥಿತಿ ಕೈಮೀರುತ್ತಿರುವುದಾಗಿ ಎಚ್ಚರಿಸಿದ್ದರು.

ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸಿದ ದವಾಡಿ, ತಕ್ಷಣವೇ ಶಾಲೆಯ ಗಂಟೆ ಬಾರಿಸಿ ಎಲ್ಲಾ ತರಗತಿಗಳಿಂದ ಮಕ್ಕಳನ್ನು ಖಾಲಿ ಮಾಡಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಸುಮಾರು 75 ಕಿಲೋಮೀಟರ್ ವೇಗದಲ್ಲಿ ರಭಸದಿಂದ ಹರಿದುಬರುತ್ತಿದ್ದ ನೀರನ್ನು ಕಂಡು, ಯಾವುದೇ ನೂಕುನುಗ್ಗಲು ಉಂಟಾಗದಂತೆ ತಾವೇ ಶಾಲೆಯ ಮುಖ್ಯ ದ್ವಾರದ ಬಳಿ ನಿಂತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಆತಂಕದ ವಾತಾವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಗೊಂಡಾಗ ಆಕೆಯನ್ನು ದ್ವಿಚಕ್ರ ವಾಹನದಲ್ಲಿ ಎತ್ತರದ ಸ್ಥಳಕ್ಕೆ ತಲುಪಿಸಲಾಯಿತು.

ಉಳಿದ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಕಾಲ್ನಡಿಗೆಯಲ್ಲೇ ಬೆಟ್ಟದ ಮೇಲಿನ ಎತ್ತರದ ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಿದರು. ಎಲ್ಲರೂ ಎತ್ತರದ ಸ್ಥಳ ತಲುಪಿದ ಕೆಲವೇ ಕ್ಷಣಗಳಲ್ಲಿ, ಉಕ್ಕಿ ಹರಿದ ಪ್ರವಾಹದ ನೀರು ಮೂರು ಅಂತಸ್ತಿನ ಬೃಹತ್ ಶಾಲಾ ಕಟ್ಟಡವನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಯಿತು. ಸೆಕೆಂಡುಗಳ ಅಂತರದಲ್ಲಿ ರಾಜೇಂದ್ರ ದವಾಡಿ ತೆಗೆದುಕೊಂಡ ದೃಢ ನಿರ್ಧಾರ 1,643 ಮಕ್ಕಳ ಜೀವ ಕಾಪಾಡಿದೆ.

Category
ಕರಾವಳಿ ತರಂಗಿಣಿ