ನೇಪಾಳ : ನೇಪಾಳದ ಭೋಟೆ ಕೋಶಿ ನದಿ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 579ಕ್ಕೆ ಏರಿಕೆಯಾಗಿದ್ದು, ಭಾರತೀಯರು ಸೇರಿದಂತೆ 2,400ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಆರಂಭದಲ್ಲಿ ವಿದೇಶಿ ಶೋಧ ಮತ್ತು ರಕ್ಷಣಾ ತಂಡಗಳ ನೆರವು ಬೇಡವೆಂದು ನಿರಾಕರಿಸಿದ್ದ ನೇಪಾಳ ಸರ್ಕಾರ, ಅಂತಾರಾಷ್ಟ್ರೀಯ ಸಮುದಾಯದ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಇದೀಗ ತನ್ನ ನಿರ್ಧಾರದಿಂದ ಯೂ-ಟರ್ನ್ ತೆಗೆದುಕೊಂಡಿದೆ.
ನೇಪಾಳಿ ಸೇನೆಯೇ ಶೋಧ ಹಾಗೂ ರಕ್ಷಣಾ ಕಾರ್ಯಗಳನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಪ್ರಧಾನಿ ಬಾಲೇಂದ್ರ ಶಾ ಹೇಳಿದ್ದರು. ಆದರೆ ಪ್ರವಾಹದಲ್ಲಿ ನೂರಾರು ವಿದೇಶಿಯರು ಸಿಲುಕಿರುವುದರಿಂದ ಮತ್ತು ವಿವಿಧ ದೇಶಗಳ ನಾಗರಿಕರು ಕಾಣೆಯಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಿಂದ ಭಾರಿ ಒತ್ತಡ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆದಿದ್ದು, ಸುರಂಗ ರಕ್ಷಣೆ, ಡಿಎನ್‌ಎ ಪರೀಕ್ಷೆ ಹಾಗೂ ವಿಧಿವಿಜ್ಞಾನ (ಫೊರೆನ್ಸಿಕ್) ಪರೀಕ್ಷೆಗಳಂತಹ ಸೀಮಿತ ತಾಂತ್ರಿಕ ಕ್ಷೇತ್ರಗಳಲ್ಲಿ ವಿದೇಶಿ ತಜ್ಞರ ನೆರವು ಪಡೆಯಲು ನಿರ್ಧರಿಸಿದೆ.
ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ಮೌಲ್ಯಮಾಪನದ ಆಧಾರದ ಮೇಲೆ ಭಾರತ, ಚೀನಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳ ಸಹಾಯವನ್ನು ಅನುಮೋದಿಸಲಾಗಿದೆ. ಈ ನಾಲ್ಕು ದೇಶಗಳ ತಜ್ಞರು ಹಾಗೂ ತಂತ್ರಜ್ಞರು ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾತನಾಡಿ, ಪರಿಣತಿಯ ಕೊರತೆಯಿರುವ ವಿಶೇಷ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಮಾತ್ರ ವಿದೇಶಿ ಸಹಾಯ ಪಡೆಯಲಾಗುತ್ತಿದೆಯೇ ಹೊರತು ಸಾಮಾನ್ಯ ಶೋಧ ಕಾರ್ಯಗಳಿಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ ಭಾರತವು ನೇಪಾಳಕ್ಕೆ ಭಾರಿ ಪ್ರಮಾಣದ ಪರಿಹಾರ ನೆರವು ನೀಡುತ್ತಿದೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ನೇಪಾಳ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿದ್ದು, ಸಂಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದ್ದಾರೆ. ಈಗಾಗಲೇ 2 ವಿಮಾನಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗಿದ್ದು, 3ನೇ ವಿಮಾನವನ್ನು ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಸಿಲುಕಿರುವ ಜನರ ರಕ್ಷಣೆಗೆ ಬೈಲಿ ಸೇತುವೆಗಳು, ತಜ್ಞ ತಂತ್ರಜ್ಞರು ಮತ್ತು ವೈದ್ಯರ ತಂಡವನ್ನು ಕಳುಹಿಸಲಾಗುತ್ತಿದ್ದು, ಅಗತ್ಯಬಿದ್ದರೆ ಎನ್‌ಡಿಆರ್‌ಎಫ್ (NDRF) ಪಡೆಯನ್ನೂ ನಿಯೋಜಿಸಲು ಭಾರತ ಸಿದ್ಧವಾಗಿದೆ.
ಅಧಿಕೃತ ಮಾಹಿತಿಯಂತೆ ಪ್ರವಾಹ ದುರಂತದಲ್ಲಿ 579 ಮಂದಿ ಅಂತಿಮವಾಗಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ನಾಪತ್ತೆಯಾಗಿರುವ 2,400ಕ್ಕೂ ಅಧಿಕ ಜನರಲ್ಲಿ 320ಕ್ಕೂ ಹೆಚ್ಚು ಭಾರತೀಯರು ಸೇರಿದಂತೆ ಒಟ್ಟು 540ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸೇರಿದ್ದಾರೆ.