ಟಿಬೆಟ್ : ಟಿಬೆಟ್‌ನ ನ್ಯಾಲಮ್ ಕೌಂಟಿಯಲ್ಲಿರುವ 'ಜಿಝಾಂಗ್ ಹಿಮಸರೋವರ' ದಿಢೀರನೆ ಒಡೆದು ಭೀಕರ ಪ್ರವಾಹ ಸೃಷ್ಟಿಸಿರುವ ಅತ್ಯಂತ ಅಪರೂಪದ ಹಾಗೂ ಭಯಾನಕ ವೀಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿಸರ್ಗ ನಿರ್ಮಿತ ಈ ಹಿಮನದಿಯ ಅಣೆಕಟ್ಟು ಏಕಾಏಕಿ ಕುಸಿದು ಬಿದ್ದಿದ್ದರಿಂದ ಕೆಳಭಾಗದಲ್ಲಿರುವ ನೇಪಾಳದ ಗಡಿ ಪ್ರದೇಶಗಳಲ್ಲಿ ಭಾರಿ ಜಲಪ್ರಳಯ ಸಂಭವಿಸಿದೆ.
ಚೀನಾ ಸರ್ಕಾರವು ಭಾರತ ಮತ್ತು ನೇಪಾಳ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನ ದಟ್ಟ ಹಿಮಚ್ಛಾದಿತ ಪ್ರದೇಶಗಳಲ್ಲಿ ಅತ್ಯಂತ ಆಧುನಿಕ ತಂತ್ರಜ್ಞಾನದ ಕಣ್ಗಾವಲು ಜಾಲವನ್ನು ಸ್ಥಾಪಿಸಿದೆ. ರಿಮೋಟ್ ಸೆನ್ಸಿಂಗ್ ಸ್ಟೇಷನ್‌ಗಳು, ಆಟೋಮೇಟೆಡ್ ಡ್ರೋನ್ ವ್ಯವಸ್ಥೆ ಹಾಗೂ ಸೆನ್ಸರ್‌ಗಳನ್ನು ಸರೋವರಗಳ ಬಳಿ ಅಳವಡಿಸಲಾಗಿದ್ದು, ನೀರಿನ ಮಟ್ಟ ಏರಿಕೆಯಾದ ತಕ್ಷಣವೇ ನಿಯಂತ್ರಣ ಕೊಠಡಿಗೆ ರಿಯಲ್-ಟೈಮ್ ಎಚ್ಚರಿಕೆಗಳು ತಲುಪುವ ವ್ಯವಸ್ಥೆಯಿದೆ.
ಟಿಬೆಟ್ ಸ್ವಾಯತ್ತ ಪ್ರದೇಶದ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡಗಳು ಈ ಹಿಮಸರೋವರಗಳ ಮೇಲೆ ನಿರಂತರ ನಿಗಾ ಇಡುತ್ತಿದ್ದು, ಜಿಝಾಂಗ್ ಸರೋವರವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಎಂಬುದು ಚೀನಾದ ಸಂಶೋಧಕರಿಗೆ ಮುಂಚಿತವಾಗಿಯೇ ತಿಳಿದಿತ್ತು. ಚೀನಾ ಹಾಗೂ ನೇಪಾಳ ನಡುವೆ ನೈಸರ್ಗಿಕ ವಿಕೋಪಗಳ ಡೇಟಾ ವಿನಿಮಯ ಒಪ್ಪಂದಗಳಿದ್ದರೂ, ಚೀನಾ ನೀಡಬೇಕಿದ್ದ ರಿಯಲ್-ಟೈಮ್ ಮುನ್ನೆಚ್ಚರಿಕೆ ಅತ್ಯಂತ ವಿಳಂಬವಾಯಿತು ಎಂದು ನೇಪಾಳ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ.
ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ICIMOD) ಸಂಸ್ಥೆಯು ಈ ಸರೋವರ ಅಪಾಯದಲ್ಲಿದೆ ಎಂದು ಸಾಮಾನ್ಯ ಎಚ್ಚರಿಕೆಗಳನ್ನು ನೀಡಿತ್ತಾದರೂ, ಪ್ರವಾಹ ಬರುವ 1-2 ಗಂಟೆಗಳ ಮೊದಲು ಸಿಗಬೇಕಾದ 'ಲೈವ್ ಅರ್ಲಿ ವಾರ್ನಿಂಗ್' ನೇಪಾಳಕ್ಕೆ ಸಿಗಲಿಲ್ಲ. ಚೀನಾದ ಈ ನಿರ್ಲಕ್ಷ್ಯದಿಂದಾಗಿ ನೇಪಾಳದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಯಾವುದೇ ಸಮಯ ಸಿಗದೆ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾಗೂ ಜೀವಹಾನಿ ಸಂಭವಿಸಿದೆ.