ಮಾಸ್ಕೋ : ಉಕ್ರೇನ್ ಜೊತೆಗಿನ ಯುದ್ಧದ ನಡುವೆಯೇ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಅಮೆರಿಕ ವಾಯುಪಡೆಯ ಸಿ-17ಎ (C-17A) ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನ ಪ್ರತ್ಯಕ್ಷವಾಗಿರುವುದು ಇಡೀ ಯುರೋಪ್ ಹಾಗೂ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತೀವ್ರ ಆಘಾತ ಮತ್ತು ಕುತೂಹಲ ಸೃಷ್ಟಿಸಿದೆ. ವಾಷಿಂಗ್ಟನ್‌ನಿಂದ ಹೊರಟು ಲಾಟ್ವಿಯಾ ಮಾರ್ಗವಾಗಿ ಮಾಸ್ಕೋದ ನುಖೋವ್ಸ್ಕಿ ವಿಮಾನ ನಿಲ್ದಾಣದಲ್ಲಿ ಇಳಿದ ಈ ಅಮೆರಿಕನ್ ಸೇನಾ ವಿಮಾನದಲ್ಲಿ ಅಮೆರಿಕದ ಅತ್ಯಂತ ಅಪಾಯಕಾರಿ ಗುಪ್ತಚರ ಸಂಸ್ಥೆ ಸಿಐಎ (CIA) ನಿರ್ದೇಶಕ ಜಾನ್ ರಾಟ್‌ಕ್ಲಿಫ್ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ರಷ್ಯಾಕ್ಕೆ ನೀಡಿದ ಮೊದಲ ರಹಸ್ಯ ಭೇಟಿ ಇದಾಗಿದೆ. ಆರಂಭದಲ್ಲಿ ಟ್ರಂಪ್ ಅವರ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಅಥವಾ ಜೇರೆಡ್ ಕುಶ್ನರ್ ಬಂದಿರಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ, ನಂತರ ಪ್ರಮುಖ ಅಮೆರಿಕನ್ ಮಾಧ್ಯಮಗಳು ಸ್ವತಃ ಸಿಐಎ ಮುಖ್ಯಸ್ಥ ಜಾನ್ ರಾಟ್‌ಕ್ಲಿಫ್ ವಿಮಾನದಲ್ಲಿದ್ದರೆಂದು ದೃಢಪಡಿಸಿವೆ.
ಈ ಭೇಟಿಯ ಕುರಿತು ಶ್ವೇತಭವನ ಹಾಗೂ ಕ್ರೆಮ್ಲಿನ್ ಎರಡೂ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲವಾದರೂ, ಮಾಸ್ಕೋದ ಬೀದಿಗಳಲ್ಲಿ ಕಂಡುಬಂದ ದೊಡ್ಡ ಮಟ್ಟದ ರಾಜತಾಂತ್ರಿಕ ಬೆಂಗಾವಲು ಪಡೆ ಮತ್ತು ಉನ್ನತ ಮಟ್ಟದ ಭದ್ರತೆಯು ಬ್ಯಾಕ್-ಚಾನೆಲ್ ಮಾತುಕತೆಯನ್ನು ದೃಢಪಡಿಸಿದೆ. ಐತಿಹಾಸಿಕವಾಗಿ ಅಮೆರಿಕ ಮತ್ತು ರಷ್ಯಾ ನಡುವಿನ ಸೂಕ್ಷ್ಮ ಸನ್ನಿವೇಶಗಳಲ್ಲಿ ಕೈದಿಗಳ ವಿನಿಮಯ ಹಾಗೂ ರಾಜತಾಂತ್ರಿಕ ಸಂವಹನ ನಿರ್ವಹಿಸುವಲ್ಲಿ ಸಿಐಎ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಈ ಹಠಾತ್ ಭೇಟಿಯು ಪ್ರಮುಖ ಭೌಗೋಳಿಕ ಕಾರ್ಯತಂತ್ರದ ಒಪ್ಪಂದಗಳು ಅಥವಾ ಕೈದಿಗಳ ಬಿಡುಗಡೆಯ ಪ್ರಕ್ರಿಯೆಗೆ ನಾಂದಿ ಹಾಡಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.