image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಭಾರತಕ್ಕೆ ಇಂಧನ, ರಸಗೊಬ್ಬರ ಪೂರೈಕೆಯ ಅಭಯ ನೀಡಿದ ರಷ್ಯಾ

ಭಾರತಕ್ಕೆ ಇಂಧನ, ರಸಗೊಬ್ಬರ ಪೂರೈಕೆಯ ಅಭಯ ನೀಡಿದ ರಷ್ಯಾ

ಮಾಸ್ಕೋ : ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತಕ್ಕೆ ಇಂಧನ ಹಾಗೂ ರಸಗೊಬ್ಬರಗಳನ್ನು ತಡೆರಹಿತವಾಗಿ ಪೂರೈಸುವುದಾಗಿ ರಷ್ಯಾ ಅಭಯ ನೀಡಿದೆ. ಮಾಸ್ಕೋಗೆ ಭೇಟಿ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ವಿವಿಧ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರದ ಕುರಿತು ಪ್ರಮುಖ ಚರ್ಚೆ ನಡೆಸಿದರು.

ಈ ಸಭೆಯಲ್ಲಿ ಭಾರತೀಯ ರೈತರು ಮತ್ತು ಕೃಷಿ ವಲಯದ ಅಗತ್ಯತೆಗಳನ್ನು ಪೂರೈಸಲು ರಷ್ಯಾ ಸರ್ವಪ್ರಯತ್ನ ಮಾಡಲಿದೆ ಹಾಗೂ ಸರಬರಾಜು ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಪುಟಿನ್ ಭರವಸೆ ನೀಡಿದ್ದಾರೆ. ಚರ್ಚೆಯ ವೇಳೆ ಸಚಿವ ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಸಂದೇಶ ಮತ್ತು ಶುಭಾಶಯಗಳನ್ನು ಪುಟಿನ್ ಅವರಿಗೆ ತಲುಪಿಸಿದರು. ಮುಂಬರುವ ಎಸ್‌ಸಿಒ ಹಾಗೂ ಬ್ರಿಕ್ಸ್ ಶೃಂಗಸಭೆಗಳಲ್ಲಿ ಪುಟಿನ್ ಅವರನ್ನು ಭೇಟಿಯಾಗಲು ಪ್ರಧಾನಿ ಮೋದಿ ಎದುರು ನೋಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ತಮ್ಮ ಭೇಟಿಯ ಕುರಿತು ಮಾತನಾಡಿದ ಜೈಶಂಕರ್, ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರ, ವ್ಯಾಪಾರ, ಇಂಧನ, ರಸಗೊಬ್ಬರ ಹಾಗೂ ಪರಮಾಣು ಕ್ಷೇತ್ರಗಳಲ್ಲಿನ ಬಾಂಧವ್ಯ ಗಣನೀಯವಾಗಿ ವೃದ್ಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದರೊಂದಿಗೆ ರಷ್ಯಾದ ಪ್ರಥಮ ಉಪ ಪ್ರಧಾನಿ ಡೆನಿಸ್ ಮಂತುರೋವ್ ಅವರೊಂದಿಗೆ ಭಾರತ-ರಷ್ಯಾ ಅಂತರ್ ಸರ್ಕಾರಿ ಆಯೋಗದ ಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಿ, ವ್ಯಾಪಾರ, ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಾಲೋಚನೆ ನಡೆಸಿದರು.

Category
ಕರಾವಳಿ ತರಂಗಿಣಿ