ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಇರಾನ್‌ನ ರಾಜಧಾನಿ ಟೆಹ್ರಾನ್‌ಗೆ ಅಧಿಕೃತ ಭೇಟಿ ನೀಡಿದ್ದು, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಘಲಿಬಾಫ್ ಮತ್ತು ಗೃಹ ಸಚಿವ ಎಸ್ಕಾಂದರ್ ಮೊಮೆನಿ ಅವರೊಂದಿಗೆ ಪ್ರಮುಖ ಮಾತುಕತೆ ನಡೆಸಿದ್ದಾರೆ. ಈ ಉನ್ನತ ಮಟ್ಟದ ಸಭೆಯಲ್ಲಿ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಹಾಗೂ ಮಧ್ಯಪ್ರಾಚ್ಯದ ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಇರಾನ್ ಸ್ಪೀಕರ್ ಘಲಿಬಾಫ್, ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪಿಸಲು ಪಾಕಿಸ್ತಾನ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಅಮೆರಿಕ ತನ್ನ ಬದ್ಧತೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದ ಅವರು, ವಾಷಿಂಗ್ಟನ್‌ನ ಈ ಧೋರಣೆಯು ಪ್ರಾದೇಶಿಕ ಸ್ಥಿರತೆಗೆ ಅಡ್ಡಿಯುಂಟುಮಾಡಿದೆ ಮತ್ತು ಅಮೆರಿಕದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಕುಂದಿಸಿದೆ ಎಂದು ಸ್ಪಷ್ಟಪಡಿಸಿದರು.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷಗಳಿಗೆ ಶಾಂತಿಯುತ, ಶಾಶ್ವತ ಮತ್ತು ಸಮಗ್ರ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾದೇಶಿಕ ರಾಜತಾಂತ್ರಿಕ ಪ್ರಯತ್ನಗಳನ್ನು ಉತ್ತೇಜಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳ ಯೋಜನೆ ಹಾಗೂ ಇದಕ್ಕೆ ಪ್ರತಿಯಾಗಿ ಇರಾನ್ ನೀಡುತ್ತಿರುವ ಮಿಲಿಟರಿ ಬೆದರಿಕೆಯಿಂದಾಗಿ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗಿರುವ ಬೆನ್ನಲ್ಲೇ ಈ ರಾಜತಾಂತ್ರಿಕ ಭೇಟಿ ನಡೆದಿದೆ. ಒಮನ್ ವಿದೇಶಾಂಗ ಸಚಿವ ಬದ್ರ್ ಅಲ್ಬುಸೈದಿ ಅವರ ಟೆಹ್ರಾನ್ ಭೇಟಿಗೂ ಮುನ್ನವೇ ಪಾಕ್ ಸೇನಾ ಮುಖ್ಯಸ್ಥರ ಈ ಭೇಟಿ ನಡೆದಿರುವುದು ಜಾಗತಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.